ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬುಧವಾರ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದು, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಂಡಳಿಯು ಸ್ಲ್ಯಾಬ್ ಗಳಲ್ಲಿ ಮಹತ್ವದ ಬದಲಾವಣೆಗೆ ಬುಧವಾರ ಅನುಮೋದನೆ ನೀಡಿದೆ.
ಸಾಮಾನ್ಯ ಜನರಿಗೆ ಆರ್ಥಿಕ ಪರಿಹಾರ ನೀಡುವ ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಜಿಎಸ್ಟಿ ಕೌನ್ಸಿಲ್ನ 56ನೇ ಸಭೆಯಲ್ಲಿ, ಅಗತ್ಯ ದೈನಂದಿನ ವಸ್ತುಗಳ ಮೇಲೆ 0% ಜಿಎಸ್ಟಿ (0% GST) ಮಾಡಿದೆ. ಜನರು ಪ್ರತಿದಿನ ಬಳಸುವಂತಹ ಹಾಲು, ಚೀಸ್, ರೊಟ್ಟಿ, ಸ್ಟೇಷನರಿ ವಸ್ತುಗಳು, ಮತ್ತು ಆರೋಗ್ಯ ಹಾಗೂ ಜೀವ ವಿಮಾ ಪಾಲಿಸಿಗಳ ಮೇಲಿನ ಜಿಎಸ್ಟಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೂ ಕೊಂಚ ರಿಲೀಫ್ ಕೊಡಲಾಗಿದೆ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಹೇರ್ ಆಯಿಲ್ನಿಂದ ಸೇರಿದಂತೆ ಕಾರ್ನ್ಪ್ಲೇಕ್ಸ್, ಟಿವಿ ಸೆಟ್ಗಳಿಂದ ಹಿಡಿದು ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿ ವರೆಗಿನ ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಜಿಎಸ್ಟಿ ಸ್ಲ್ಯಾಬ್ ಗಳಲ್ಲಿ ಮಹತ್ವದ ಬದಲಾವಣೆಗೆ ಅನುಮೋದನೆ ನೀಡಲಾಗಿದೆ.
ಪ್ರಸ್ತುತ ನಾಲ್ಕು GST ಸ್ಲ್ಯಾಬ್ಗಳಿದ್ದು, ಶೇ.5, ಶೇ.12, ಶೇ.18 ಹಾಗೂ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್ಗಳನ್ನು ತೆಗೆದುಹಾಕಿ, ಕೇವಲ ಶೇ.5 ಮತ್ತು ಶೇ.18ರ ಎರಡು ಹಂತದ ತೆರಿಗೆ ಸ್ಲ್ಯಾಬ್ಗಳನ್ನು ಜಾರಿಗೆ ತರಲು ಸಭೆ ಒಪ್ಪಿಗೆ ಸೂಚಿಸಲಾಗಿದೆ. ಇದು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ.
ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಹಣಕಾಸು ಸಚಿವರು, “33 ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ 12% ಜಿಎಸ್ಟಿಯನ್ನು ತೆಗೆದುಹಾಕಿ ಶೂನ್ಯಗೊಳಿಸಲಾಗಿದೆ. ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ಟಿ ತೆಗೆಯಲಾಗಿದೆ” ಎಂದು ಹೇಳಿದರು.
“ಅವಧಿ ವಿಮೆ, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿ ಸೇರಿ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್ಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಫ್ಯಾಮಿಲಿ ಫೋಟರ್ ಪಾಲಿಸಿಗಳು, ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. 2017ರಲ್ಲಿ ಈ ತೆರಿಗೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ವಿಮಾ ಉತ್ಪನ್ನಗಳ ಪ್ರೀಮಿಯಂ ಮೇಲೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು” ಎಂದು ತಿಳಿಸಿದರು.
“ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ. ಕೂದಲಿನ ಎಣ್ಣೆ, ಸೋಪು, ಶಾಂಪೂಗಳು, ಹಲ್ಲುಜ್ಜುವ ಬ್ರಷ್ಗಳು, ಟೂತ್ಪೇಸ್ಟ್, ಸೈಕಲ್ಗಳು ಹಾಗೂ ಅಡುಗೆ ಸಾಮಾನುಗಳ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕೆ ಇಳಿಸಲಾಗಿದೆ. ಎಲ್ಲ ರಾಜ್ಯಗಳು ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಗೆ ಬೆಂಬಲ ನೀಡಿವೆ. ಇದು ಒಮ್ಮತದ ನಿರ್ಧಾರವಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಜಿಎಸ್ಟಿ ಪರಿಷ್ಕರಣೆ ಕುರಿತು ಪ್ರಧಾನಿ ಮೋದಿ ಅವರು ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿದ್ದು, “ಜಿಎಸ್ಟಿ ವಿಚಾರವಾಗಿ ತಮ್ಮ ಸರ್ಕಾರ ಕೈಗೊಂಡಿರುವ ನಿರ್ಣಯಗಳು ಜನಸಾಮಾನ್ಯರ ಪರವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಬದಲಾವಣೆ ದೇಶದ ಆರ್ಥಿಕ ಪ್ರಗತಿಗೂ ವೇಗ ನೀಡಲಿದೆ” ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ವ್ಯವಸ್ಥೆಯ ಸರಳೀಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವ ಅಂಗವಾಗಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದರು. ಅಲ್ಲದೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವ ಸಂದರ್ಭದಲ್ಲಿಯೇ ಈ ಜಿಎಸ್ಟಿ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವುದು ಗಮನಾರ್ಹ.