Homeಕರ್ನಾಟಕಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಕ ಐದು ಪಾಲಿಕೆ ಅಸ್ತಿತ್ವಕ್ಕೆ: ಡಿಸಿಎಂ ಡಿ ಕೆ ಶಿವಕುಮಾರ್

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಕ ಐದು ಪಾಲಿಕೆ ಅಸ್ತಿತ್ವಕ್ಕೆ: ಡಿಸಿಎಂ ಡಿ ಕೆ ಶಿವಕುಮಾರ್

  • ನವೆಂಬರ್ 1ಕ್ಕೆ ವಾರ್ಡ್ ಪುನರ್ ವಿಂಗಡಣೆ, 30ಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟ
  • ಇಂದಿನಿಂದಲೇ (ಸೆ.3) ಆಯಾ ಪಾಲಿಕೆ ವ್ಯಾಪ್ತಿಯ ತೆರಿಗೆ ಸಂಗ್ರಹ

ಬೆಂಗಳೂರಿನಲ್ಲಿ ನಾಗರಿಕ ಸ್ನೇಹಿ ಸೇವೆ, ಉತ್ತಮ ಆಡಳಿತ, ಪರಿಣಾಮಕಾರಿಯಾಗಿ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜಾರಿಗೆ ತಂದು ಐದು ಪಾಲಿಕೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “02-09-2025ರಂದು ಬೆಂಗಳೂರು ಮಹಾನಗರದ ಪಾಲಿಗೆ ವಿಶೇಷವಾದ ದಿನ. ಈ ದಿನದಿಂದ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಪಾಲಿಕೆಗಳನ್ನು ಬೆಂಗಳೂರಿನ ಹೆಸರಿನೊಂದಿಗೆ ರಚಿಸಲು ಕಾನೂನಿನಲ್ಲೇ ತಿಳಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 26-08-2025ರಂದು ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ಸಮಿತಿ ರಚನೆಯಾಗಿದೆ. ಇದರಲ್ಲಿ 75 ಸದಸ್ಯರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು.

ಅಧಿಕಾರಿಗಳ ನೇಮಕ 

“ಎಲ್ಲ ವಲಯಗಳಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಆಡಳಿತಾಧಿಕಾರಿಗಳಾಗಿ ಆಯುಕ್ತರನ್ನು ನೇಮಕ ಮಾಡಲಾಗಿದೆ. ಆಯುಕ್ತರಿಗೆ ನೆರವಾಗಲು, ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಕೆಎಎಸ್ ಅಧಿಕಾರಿಗಳು ಹಾಗೂ ಮುಖ್ಯ ಇಂಜಿನಿಯರ್ ಕಡ್ಡಾಯವಾಗಿ ಇರುತ್ತಾರೆ. ಈ ಹಿಂದೆ ಇದ್ದ 27 ವಿಭಾಗಗಳನ್ನು 50 ವಿಭಾಗಗಳಾಗಿ ಮಾಡಿದ್ದೇವೆ. 75 ಉಪ ವಿಭಾಗಗಳನ್ನು 150ಕ್ಕೆ ಏರಿಸಿದ್ದೇವೆ. ಪ್ರತಿ ಪಾಲಿಕೆಯಲ್ಲಿ ಗರಿಷ್ಠ 150 ವಾರ್ಡ್ ಗಳವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಲಿಕೆಯಲ್ಲಿ ಸರಾಸರಿಯಲ್ಲಿ 100 ವಾರ್ಡ್ ಗಳಂತೆ ಬೆಂಗಳೂರಿನಲ್ಲಿ ಸುಮಾರು 500 ಹೊಸ ನಾಯಕರುಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಮಹಿಳೆಯರು ಹಾಗೂ ಪುರುಷರು 50:50 ಇರುತ್ತಾರೆ” ಎಂದು ತಿಳಿಸಿದರು.

“ನಾಳೆಯಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ಜಿಬಿಎಗಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಬರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ. ಇನ್ನು ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಚುನಾವಣೆ ನಡೆಯಲಿದೆ. ಸಧ್ಯ ನಗರದ ಜನಸಂಖ್ಯೆ 1.44 ಕೋಟಿ ಎಂದು ಅಂದಾಜಿಸಲಾಗಿದೆ. 2011ರ ಜನಗಣತಿ ಪ್ರಕಾರ ವಾರ್ಡ್ ನಲ್ಲಿ 20 ಸಾವಿರ ಜನಸಂಖ್ಯೆ ಇತ್ತು. ಈಗ 35-40 ಸಾವಿರ ಸರಾಸರಿಯಲ್ಲಿ ವಾರ್ಡ್ ರಚನೆ ಮಾಡಲಾಗುವುದು” ಎಂದು ವಿವರಿಸಿದರು.

“ಮುಂದಿನ ದಿನಗಳಲ್ಲಿ ಪೂರ್ವ, ಪಶ್ಚಿಮ, ಉತ್ತರ ದಕ್ಷಿಣ ಪಾಲಿಕೆಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಲು ಅವಕಾಶ ಕಲ್ಪಿಸಿದ್ದೇವೆ. ಕಾನೂನಿಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಆ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಯಾ ಪಾಲಿಕೆಗಳು ಸರ್ಕಾರವನ್ನು ವಿಶ್ವಾಸಕ್ಕೆ ಪಡೆದು ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಗಳನ್ನು ಮಾಡಿಕೊಳ್ಳಲಿವೆ. ಈಗ ಹಾಲಿ ಇದ್ದ ಪಾಲಿಕೆ ವ್ಯಾಪ್ತಿಗೆ ಜಿಬಿಎ ರಚಿಸಿ, ಐದು ಪಾಲಿಕೆ ಮಾಡಿದ್ದೇವೆ. ಇದನ್ನು ಜಾರಿಗೆ ತರಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆನೇಕಲ್ ಕ್ಷೇತ್ರಕ್ಕೆ ಸೇರಿದ್ದ ಒಂದು ವಾರ್ಡ್ ಬಿಟ್ಟುಹೋಗಿತ್ತು. ಈಗ ಅದನ್ನು ಸರಿಪಡಿಸಿದ್ದೇವೆ” ಎಂದು ಹೇಳಿದರು.

ಜಿಬಿಎ ಕಾಲಾನುಕ್ರಮ

“ಬೆಂಗಳೂರಿನ ಪಾಲಿಗೆ ಇದೊಂದು ಐತಿಹಾಸಿಕ ದಿನ. ಅಧಿಕಾರ ವಿಕೇಂದ್ರೀಕರಣಗೊಳಿಸುವ ರಾಜೀವ್ ಗಾಂಧಿ ಅವರ ಆಶಯದಂತೆ ಸಂವಿಧಾನದ 74ನೇ ತಿದ್ದುಪಡಿಯನ್ನು ಪಾಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. 1993 ಜೂನ್ 1ರಂದು ಕರ್ನಾಟಕದಲ್ಲಿ 74ನೇ ತಿದ್ದುಪಡಿ ಜಾರಿಗೆ ಬಂದಿತು. 16-1-2007ರಂದು 198 ವಾರ್ಡ್ ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. 22-09-2024ರಂದು ಬಿ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಬೆಂಗಳೂರಿನಲ್ಲಿ ಉತ್ತಮ ಆಡಳಿತ ನೀಡುವ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಸಮಿತಿ ಸಾವಿರಾರು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಧ್ಯಯನ ಮಾಡಿ 9 ವರದಿಗಳನ್ನು ಸಲ್ಲಿಸಿತು. 2015ರಲ್ಲಿ ಬೆಂಗಳೂರಿನಲ್ಲಿ ಮೂರು ಪಾಲಿಕೆಗಳನ್ನು ಮಾಡಬೇಕು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಪ್ರಸ್ತಾಪವನ್ನು ರಾಜ್ಯಪಾಲರಿಗೆ ಕಳುಹಿಸಿಲಾಗಿತ್ತಾದರೂ ನಂತರ ರಾಜ್ಯ ಸರ್ಕಾರ ಇದನ್ನು 26-7-2019 ಹಿಂಪಡೆಯಿತು” ಎಂದು ತಿಳಿಸಿದರು.

ಆರ್ಥಿಕವಾಗಿ ದುರ್ಬಲವಿರುವ ಪಾಲಿಕೆಗಳಿಗೆ ಸರ್ಕಾರದ ನೆರವು

ಈಗ ಜಾರಿಗೆ ಬಂದಿರುವ ಪಾಲಿಕೆಗಳ ಪೈಕಿ ಬೆಂಗಳೂರು ಪೂರ್ವ ಆರ್ಥಿಕವಾಗಿ ಬಲಿಷ್ಟವಾಗಿದ್ದು, ಪೂರ್ವ ಪಾಲಿಕೆ ಆರ್ಥಿಕವಾಗಿ ದುರ್ಬಲವಾಗಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದಾಗ, “ನಾವು ಅಲ್ಲಿನ ಆದಾಯವನ್ನು ಇಲ್ಲಿಗೆ ತರಲು ಸಾಧ್ಯವಿಲ್ಲ. ಪೂರ್ವ ಪಾಲಿಕೆ ಆದಾಯ ಪೂರ್ವ ಪಾಲಿಕೆಗೆ ಸೀಮಿತವಾಗಲಿದೆ, ಪಶ್ಚಿಮ ಪಾಲಿಕೆ ಆದಾಯ ಕಡಿಮೆ ಇದ್ದಾಗ ಸರ್ಕಾರ ಅವರಿಗೆ ನೆರವು ನೀಡಬೇಕು. ನಾವು ಪೂರ್ವದ ಹಣವನ್ನು ಪಶ್ಚಿಮದ ಪಾಲಿಕೆಗೆ ನೀಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿರಲಿದೆ” ಎಂದು ಹೇಳಿದರು.

ಗ್ರೇಟರ್‌ ಬೆಂಗಳೂರು

ನವೆಂಬರ್ 1ರಂದು ಹೊಸ ಪಾಲಿಕೆಗಳ ಕಚೇರಿ ಕಟ್ಟಡಗಳಿಗೆ ಭೂಮಿ ಪೂಜೆ

ಜಿಬಿಎ ಆದ್ಯತೆ ಆಡಳಿತಾತ್ಮಕವಾಗಿ ಹಳಿಗೆ ತರುವುದೋ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದೇ ಅಥವಾ ಪ್ರದೇಶಗಳ ವಿಸ್ತರಣೆಯೋ ಎಂದು ಕೇಳಿದಾಗ, “ಉತ್ತಮ ಆಡಳಿತ, ಸೇವೆ ನೀಡಬೇಕು, ಸಂವಿಧಾನ ರಕ್ಷಣೆ ನೀಡಬೇಕು. ಈ ಹಿಂದೆ ನಗರದ ಸಣ್ಣಪುಟ್ಟ ವಿಚಾರಕ್ಕೂ ಬೆಂಗಳೂರು ಆಯುಕ್ತರಿಗೆ ಕರೆ ಮಾಡಬೇಕಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಜಿಬಿಎ ಅಧಿಕಾರಿಗಳು ನಗರದ ದೊಡ್ಡ ಯೋಜನೆಗಳ ಜವಾಬ್ದಾರಿ ಮಾತ್ರ ನಿಭಾಯಿಸುತ್ತಾರೆ. ಟನಲ್ ರಸ್ತೆ ಸೇರಿದಂತೆ ಬೇರೆ ಬೇರೆ ಪಾಲಿಕೆಗಳ ಮೂಲಕ ಹಾದುಹೋಗುವ ದೊಡ್ಡ ದೊಡ್ಡ ಯೋಜನೆ ನೋಡಿಕೊಳ್ಳುತ್ತಾರೆ. ಉಳಿದಂತೆ ಇತರೆ ವಿಚಾರಗಳಿಗೆ ಆಯಾ ಪಾಲಿಕೆಗೆ ನಿಯೋಜನೆಯಾಗಿರುವ ಆಯುಕ್ತರು ಹೊಣೆಗಾರಿಕೆ ಹೊಂದಿರುತ್ತಾರೆ. ಅಧಿಕಾರವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲೆಲ್ಲಿ ಕಚೇರಿ ಇರಬೇಕು ಎಂದು ಸೂಚಿಸಿದ್ದೇವೆ. ವಲಯವಾರು ಕಚೇರಿಗಳಲ್ಲಿ ಈ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ. ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ” ಎಂದು ವಿವರಿಸಿದರು.

ಜಿಬಿಎ ಮೂಲಕ ಸಭೆ ಯಾವಾಗ ಮಾಡಲಾಗುವುದು ಎಂದು ಕೇಳಿದಾಗ, “ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಮಾಡಬೇಕು. ಪಾಲಿಕೆಗಳು ಎಂದಿನಂತೆ ಅವುಗಳ ಕಾರ್ಯಚಟುವಟಿಕೆ ಸಾಗುತ್ತಿರುತ್ತದೆ. ಎಲ್ಲಾ ಪಾಲಿಕೆಗಳ ಮೇಯರ್ ಅಧಿಕಾರ ಅವಧಿ ಎರಡೂವರೆ ವರ್ಷಕ್ಕೆ ಸೀಮಿತಗೊಳಿಸಲಾಗಿದೆ” ಎಂದು ತಿಳಿಸಿದರು.

ನವೆಂಬರ್ 1ಕ್ಕೆ ವಾರ್ಡ್ ಪುನರ್ ವಿಂಗಡಣೆ, 30ಕ್ಕೆ ಮೀಸಲಾತಿ ಅಧಿಸೂಚನೆ ಪ್ರಕಟ

ಚುನಾವಣೆ ಯಾವಾಗ ನಡೆಯಲಿದೆ ಎಂದು ಕೇಳಿದಾಗ, “ನಾವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments