ಸೌಜನ್ಯ ಹಂತಕರ ಬಗ್ಗೆ ಮಾಹಿತಿ ಹೊಂದಿರುವ ಬಿಜೆಪಿ ನಾಯಕರು ಸತ್ಯ ಬಹಿರಂಗಪಡಿಸಲಿ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರಿಗೆ ಸೌಜನ್ಯ ಹತ್ಯೆ ಮಾಡಿದವರು ಯಾರು ಎಂಬ ಮಾಹಿತಿ ಇದೆ ಎಂದು ಸ್ವತಃ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ಅವರು 2023ರಲ್ಲಿ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾಗಿದ್ದ ಕಾಲದಲ್ಲಿ ಹೇಳಿರುವುದು, ಹಾಗಾಗಿ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
“ಸೌಜನ್ಯ ಹಂತಕರ ಬಗ್ಗೆ ಬಿಜೆಪಿಯವರಿಗೆ ಮಾಹಿತಿ ಇದ್ದರೂ ಅಂದಿನಿಂದ ಇಂದಿನವರೆಗೂ ಗೌಪ್ಯವಾಗಿ ಇಟ್ಟಿರುವುದೇಕೆ? ಈಗಲೂ SIT ಮುಂದೆ ಮಾಹಿತಿ ನೀಡಲು ಮುಕ್ತ ಅವಕಾಶವಿದೆ, ಸೌಜನ್ಯ ಹಂತಕರ ಬಗ್ಗೆ ಮಾಹಿತಿ ನೀಡುವ ಬಿಜೆಪಿ ನಾಯಕರಿಗೆ ರಕ್ಷಣೆ ಒದಗಿಸುವುದು ನಮ್ಮ ಸರ್ಕಾರದ ಜವಾಬ್ದಾರಿ” ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
“ಬಿಜೆಪಿಯವರು ಸೌಜನ್ಯ ಹತ್ಯೆಗೆ ನ್ಯಾಯ ಒದಗಿಸುವ ತಮ್ಮ ವಾಗ್ದಾನವನ್ನು ನೆನಪು ಮಾಡಿಕೊಳ್ಳಲಿ, ಹಂತಕರ ಬಗ್ಗೆ ತಮಗಿರುವ ಮಾಹಿತಿ ಬಹಿರಂಗಪಡಿಸಿ ತಮ್ಮ ಬದ್ಧತೆಯನ್ನು ನಿರೂಪಿಸಲಿ” ಎಂದಿದ್ದಾರೆ.
ಇನ್ನೊಂದು ಬರಹದಲ್ಲಿ ಇದೇ ವಿಚಾರವಾಗಿ ಮಾತನಾಡಿರುವ ಅವರು, “ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು RSS vs RSS ಕಿತ್ತಾಟ. ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದಿದ್ದರು, SIT ರಚನೆಯಾದಾಗಲೂ ಸುಮ್ಮನಿದ್ದರು ಈಗ ಏಕಾಏಕಿ ಧರ್ಮಸ್ಥಳ ಚಲೋ ಅಂತಿದ್ದಾರೆ” ಎಂದು ಕುಟುಕಿದ್ದಾರೆ.
“ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಅಂತಿದ್ದಾರೆ, ಆದರೆ ಈ ಹಿಂದೆ CBI ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಪತ್ರ ಬರೆದಿತ್ತು, ಹಾಗೂ CBI ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇದೆ, ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ” ಎಂದು ಪ್ರಶ್ನಿಸಿದ್ದಾರೆ.