Homeಕರ್ನಾಟಕಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ

ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮ ರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ

ಹಿರಿಯ ಪತ್ರಕರ್ತ, ಜನಪ್ರಗತಿ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾವ್ ಅವರ ಪತ್ರಿಕೋದ್ಯಮದಲ್ಲಿನ ಸೇವೆ ಗುರುತಿಸಿ ರಾಜ್ಯ ಸರ್ಕಾರ 2025ನೇ ಸಾಲಿನ ದಿ. ದೇವರಾಜ ಅರಸು ಪ್ರಶಸ್ತಿ ಘೋಷಿಸಿದೆ.

ಪ್ರತಿಷ್ಠಿತ ಡಿ. ದೇವರಾಜ ಅರಸು ಪ್ರಶಸ್ತಿ ವಿಜೇತರಾದ ಕಲ್ಲೆ ಶಿವೋತ್ತಮ ರಾವ್ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಕೆ ಎ ದಯಾನಂದ ಅವರು ಸೋಮವಾರ ಸನ್ಮಾನಿಸಿದರು. ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್ ಕುಮಾರ್, ಕಲ್ಲೆಯವರ ಪುತ್ರ ಅಜಿತ್ ಕಲ್ಲೇ ಹಾಗೂ ಪತ್ರಕರ್ತ ಜಿ ಎನ್ ಮೋಹನ್ ಅವರು ಜತೆಗಿದ್ದರು.

ಸಾಮಾಜಿಕ ಪರಿವರ್ತನೆಯ ಹರಿಕಾರ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಅವರ
110ನೇ ಜನ್ಮ ದಿನಾಚರಣೆಯಂದು (ಆ.20) ವಿಧಾನಸೌಧದ ಬ್ಯಾಕ್ವೇಟ್‌ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕಲ್ಲೆ ಶಿವೋತ್ತಮರಾವ್ ಇವರು 1929ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಜನಿಸಿದರು. ಇವರ ಮಾತೃ ಭಾಷೆ ತುಳು. ಇವರು ಚಿಕ್ಕವರಿದ್ದಾಗ ಆಟದಲ್ಲಿ ಅಂತಹ ಆಸಕ್ತಿ ಇರಲಿಲ್ಲ. ಆಟದ ಸಮಯದಲ್ಲಿ, ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿದ್ದ ಅಪ್ಪನ ಲೈಬ್ರರಿಯಲ್ಲಿದ್ದ ಪುಸ್ತಕಗಳನ್ನೆಲ್ಲ ಪಾಠದಂತೆ ಓದಿ, ಮಹಾಭಾರತ, ರಾಮಾಯಣ, ಭಗವದ್ಗೀತೆಗಳನ್ನು ಬಾಯಿಪಾಠ ಮಾಡಿದ್ದರು. ಆದಕಾರಣ 14ನೇ ವಯಸ್ಸಿಗೆ ಮಂಗಳೂರಿನ ಕುಡವರ ‘ನವಭಾರತ’ ಎಂಬ ದೈನಿಕಕ್ಕೆ ವರದಿಗಾರನಾಗಿ ಕೆಲಸಕ್ಕೆ ಸೇರಿದರು. ಆನಂತರ ಕಡಂಗೋಡ್ಲು ಶಂಕರಭಟ್ಟರ ‘ರಾಷ್ಟ್ರ ಬಂಧು’ ವಾರಪತ್ರಿಕೆಗೆ ಸೇರಿ, `ರಾಷ್ಟ್ರ ಮತ’ ದಲ್ಲಿ ಸ್ವಲ್ಪ ದಿನವಿದ್ದು, ಅಲ್ಲಿಂದ ನೇರವಾಗಿ ಬೆಂಗಳೂರಿನ ಬಿ.ಎನ್.ಗುಪ್ತರ ‘ಜನಪ್ರಗತಿ’ ಪತ್ರಿಕೆಗೆ ಬಂದರು. ಅಲ್ಲಿ 14 ವರ್ಷಗಳ ಕಾಲ, ಕಾರ್ಯನಿರ್ವಾಹಕ ಸಂಪಾದಕರಾಗಿ, ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅದಾದ ಮೇಲೆ ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ತಲಾ ಮೂರು ವರ್ಷ ಸೇವೆ ಸಲ್ಲಿಸಿದರು. ಎನ್‌ಲೈಟ್’ ಎಂಬ ಇಂಗ್ಲಿಷ್ ವಾರಪತ್ರಿಕೆಗೂ ಬರೆದರು. ಇವರು ಜೆಪಿ, ಲೋಹಿಯಾರ ಸಮಾಜವಾದ; ಎಡಪಂಥೀಯ ವಿಚಾರಧಾರೆಯನ್ನು ಒಪ್ಪಿದವರು.

ಆಗಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ, ತಾಯಿನಾಡು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ದೈನಿಕಗಳು ಮತ್ತು ಜನಪ್ರಗತಿ, ಕಂಠೀರವ ಎಂಬ ವಾರಪತ್ರಿಕೆಗಳು, ಜನಪ್ರಗತಿ ವಾರಪತ್ರಿಕೆಯಲ್ಲಿ ಸರ್ಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸುವ, ಓದುಗರನ್ನು ಜಾಗೃತರನ್ನಾಗಿಸುವ ಅಗ್ರ ಲೇಖನಗಳು ಪ್ರಕಟವಾಗುತ್ತಿದ್ದ ಕಾರಣ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಪತ್ರಿಕೆಯ ಸಂಪಾದಕರಾಗಿದ್ದ ಕಲ್ಲೆ ಶಿವೋತ್ತಮ ರಾಯರು ಪ್ರಬುದ್ಧ, ಚಿಂತನಾರ್ಹ ರಾಜಕೀಯ ವಿಶ್ಲೇಷಣೆಗೆ ಹೆಸರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments