Homeಕರ್ನಾಟಕಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನವಾದ ಭೂಮಿಗೆ ಎರಡೆರಡು ಸಲ ಪರಿಹಾರ: ಎಂ ಬಿ ಪಾಟೀಲ್

ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನವಾದ ಭೂಮಿಗೆ ಎರಡೆರಡು ಸಲ ಪರಿಹಾರ: ಎಂ ಬಿ ಪಾಟೀಲ್

ಕೈಗಾರಿಕಾ ಉದ್ದೇಶಗಳಿಗೆಂದು ಕೆಐಡಿಬಿಡಿ ಮೂಲಕ ಭೂಸ್ವಾಧೀನ ಪಡಿಸಿಕೊಂಡಿರುವ ಕೆಲವೆಡೆಗಳಲ್ಲಿ ಸಂತ್ರಸ್ತ ರೈತರಿಗೆ ಅಧಿಕಾರಿಗಳ ತಪ್ಪಿನಿಂದ ಹಿಂದಿನ ಸರಕಾರದ ಅವಧಿಯಲ್ಲಿ ಎರಡೆರಡು ಬಾರಿ ಪರಿಹಾರ ಕೊಡಲಾಗಿದೆ. ಇಂತಹ ಪ್ರಕರಣಗಳ ಸಂಬಂಧ ಈಗಾಗಲೇ ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದ್ದು, ಒಬ್ಬರು ಜೈಲಿನಲ್ಲೂ ಇದ್ದಾರೆ. ಇಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಎಸ್‌ ಎಸ್‌ ಭೋಜೇಗೌಡ ಅವರು ಮಂಗಳವಾರ ಕೇಳಿದ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿ, “ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು ಕಾನೂನು ರೀತ್ಯಾ ವಸೂಲು ಮಾಡಲಾಗುವುದು” ಎಂದು ತಿಳಿಸಿದರು.

“ಧಾರವಾಡ ಜಿಲ್ಲೆಯ ಕೆಳಗೇರಿ, ಮುಮ್ಮಿಗಟ್ಟಿ, ಕೋಟೂರು ಮತ್ತು ಬೇಲೂರು ಕೈಗಾರಿಕಾ ಪ್ರದೇಶಗಳಲ್ಲಿ ಹಿಂದಿನ ಸರಕಾರವಿದ್ದಾಗ ಕೆಲವು ಜಮೀನುಗಳಿಗೆ ಎರಡೆರಡು ಬಾರಿ ಪರಿಹಾರ ವಿತರಣೆಯಾಗಿದೆ. ಇದರಲ್ಲಿ ಭೂಮಿಯ ಮೂಲ ಮಾಲೀಕರು ಮತ್ತು ಅಧಿಕಾರಿಗಳು ಷಾಮೀಲಾಗಿದ್ದು, 19.99 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಎರಡನೇ ಬಾರಿ ಹೆಚ್ಚುವರಿಯಾಗಿ ಪರಿಹಾರ ರೂಪದಲ್ಲಿ ಹೋಗಿದೆ. ಇದು ತನಿಖೆಯಿಂದ ದೃಢಪಟ್ಟಿದೆ. ಆಗ ಇದ್ದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಇತರ ಸಿಬ್ಬಂದಿ ಮೇಲೆ ಪ್ರಕರಣ ದಾಖಲಾಗಿದೆ. ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದ್ದು, ಹೆಚ್ಚುವರಿಯಾಗಿ ನೀಡಿರುವ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿದೆ” ಎಂದು ಅವರು ವಿವರಿಸಿದ್ದಾರೆ.

“ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದಲ್ಲೂ ಒಂದು ಜಮೀನಿಗೆ ಹೀಗೆಯೇ ಎರಡನೇ ಬಾರಿ 1.58 ಕೋಟಿ ರೂ. ಹಣವನ್ನು ಪರಿಹಾರವೆಂದು ಕೊಡಲಾಗಿದೆ. ಈ ಪ್ರಕರಣದಲ್ಲಿ ಹಿಂದೆ ಸಣ್ಣ ನೀರಾವರಿ ಇಲಾಖೆ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ನಂತರದ ದಿನಗಳಲ್ಲಿ ಕೆಐಎಡಿಬಿ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಸಂಬಂಧ ಹೈಕೋರ್ಟಿನಲ್ಲಿ ಪ್ರಕರಣ ದಾಖಲಾಗಿದ್ದು, ಭೂಮಿಯ ಮಾಲೀಕರು 75 ಲಕ್ಷ ರೂ.ಗಳನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುತ್ತಾರೆ. ಸದರಿ ಪ್ರಕರಣದಲ್ಲಿ ಅಂತಿಮ ಆದೇಶ ಬಾಕಿ ಇದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ” ಎಂದು ಪಾಟೀಲ್ ತಿಳಿಸಿದ್ದಾರೆ.‌

ಸೇಡಂ ತಾಲ್ಲೂಕಿನ ರಾಜಶ್ರೀ ಸಿಮೆಂಟ್ಸ್‌ ಕಾರ್ಖಾನೆ ವಿಚಾರ

“ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನಲ್ಲಿ ರಾಜಶ್ರೀ ಸಿಮೆಂಟ್ಸ್‌ ಕಂಪನಿಗೆ ಸಿಮೆಂಟ್‌ ಕಾರ್ಖಾನೆ ಸ್ಥಾಪನೆಗೆ 573 ಎಕರೆ ಮತ್ತು ಗಣಿಗಾರಿಕೆಗೆಂದು 398.23 ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿಸಲು 2010ರಲ್ಲೇ ಅನುಮೋದನೆ ನೀಡಲಾಗಿತ್ತು. ಹೀಗಾಗಿ, ಈಗ ಸಂತ್ರಸ್ತ ರೈತರಿಗೆ ಹೆಚ್ಚಿನ ಪರಿಹಾರ ಕೊಡಬೇಕೆಂದು ಆಗ್ರಹಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ.

ವಿಧಾನ ಪರಿಷತ್‌ ನಲ್ಲಿ ಡಾ.ತಳವಾರ್‌ ಸಾಬಣ್ಣ ಅವರು ಮಂಗಳವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

“ಸೇಡಂ ತಾಲ್ಲೂಕಿನ ಹಂಗನಹಳ್ಳಿ ಊಡಗಿ, ಹುಡಾ(ಬಿ) ಮತ್ತು ನೃಪತುಂಗ ನಗರಗಳಲ್ಲಿ ರಾಜಶ್ರೀ ಸಿಮೆಂಟ್ಸ್‌ ಭೂಮಿ ಕೇಳಿತ್ತು. ಅದರ ಮನವಿಯನ್ನು ಪರಿಗಣಿಸಿ 2010ರ ನ.27ರಂದು ಮತ್ತು 2011ರ ಜ.25ರಂದು ಸರಕಾರವು 1961ರ ಭೂ ಸುಧಾರಣೆ ಕಾಯ್ದೆಯಡಿ ಅನುಮೋದನೆ ನೀಡಿತ್ತು. ಇದಾದಮೇಲೆ, ಕಂಪನಿಯು ಭೂ ಖರೀದಿಗೆ ಸಂಬಂಧಿಸಿದಂತೆ ರೈತರೊಂದಿಗೆ ನೇರ ಒಪ್ಪಂದ ಮಾಡಿಕೊಂಡಿತ್ತು. ಆಗ ಎಕರೆಗೆ 70 ಸಾವಿರ ರೂ. ಬೆಲೆ ಇತ್ತು. ಅಂತಹ ಸಂದರ್ಭದಲ್ಲಿ ಕಂಪನಿಯು 921 ಎಕರೆ ಖರೀದಿಸಿದ್ದು, ಪ್ರತೀ ಎಕರೆಗೆ 3.50 ಲಕ್ಷ ರೂ. ಪರಿಹಾರಧನ ನೀಡಿದೆ” ಎಂದು ತಿಳಿಸಿದ್ದಾರೆ.

“ಈ ಸಂದರ್ಭದಲ್ಲಿ ಸಂತ್ರಸ್ತ ರೈತರು, ತಮ್ಮ ಕುಟುಂಬಗಳ ತಲಾ ಒಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕೆಂಬ ಆಗ್ರಹ ಮುಂದಿಟ್ಟಿದ್ದರು. ಆಗ ಕಾರ್ಖಾನೆಯು ಉದ್ಯೋಗದ ಬದಲು ಎಕರೆಗೆ ತಲಾ 2.75 ಲಕ್ಷ ರೂ. ಹೆಚ್ಚುವರಿ ಹಣವನ್ನೇ ನೀಡಿತು. ಇದಾದ ಮೇಲೂ ಕೆಲವು ರೈತರು ಮತ್ತೂ ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸಿದರು. ಆಗ ಕಾರ್ಖಾನೆಯು ಎಲ್ಲ ಸಂತ್ರಸ್ತ ರೈತರಿಗೂ ಪುನಃ ಹೆಚ್ಚುವರಿಯಾಗಿ ಎಕರೆಗೆ 1.75 ಲಕ್ಷ ರೂ. ಕೊಟ್ಟಿದೆ. ಅಂದರೆ, ಒಟ್ಟಾರೆಯಾಗಿ ಅದು ಒಂದು ಎಕರೆಗೆ ತಲಾ 8 ಲಕ್ಷ ರೂ. ಮೊತ್ತವನ್ನು ಪರಿಹಾರವಾಗಿ ನೀಡಿದೆ” ಎಂದು ವಿವರಿಸಿದ್ದಾರೆ.

“ಕಂಪನಿ ಮತ್ತು ರೈತರ ನಡುವೆಯೇ ಒಪ್ಪಂದವಾಗಿದ್ದರಿಂದ ಇದರಲ್ಲಿ 1961ರ ಭೂ ಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ. ಈ ವರ್ಷದ ಮಾರ್ಚ್‌ವರೆಗಿನ ಅಂಕಿಅಂಶಗಳ ಪ್ರಕಾರ, ಈ ಕಂಪನಿಯು ಒಟ್ಟು 1,345 ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ. ಇದು ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚಾಗಿದೆ” ಎಂದು ಸಚಿವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments