Homeಕರ್ನಾಟಕಮತಗಳ್ಳತನ ವುರುದ್ಧ ‘ಮಾಡು ಇಲ್ಲವೇ ಮಡಿ’ ಧ್ಯೇಯದೊಂದಿಗೆ ಹೋರಾಟ: ಮಲ್ಲಿಕಾರ್ಜುನ ಖರ್ಗೆ

ಮತಗಳ್ಳತನ ವುರುದ್ಧ ‘ಮಾಡು ಇಲ್ಲವೇ ಮಡಿ’ ಧ್ಯೇಯದೊಂದಿಗೆ ಹೋರಾಟ: ಮಲ್ಲಿಕಾರ್ಜುನ ಖರ್ಗೆ

2024ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತಗಳ್ಳತನ ಮಾಡಿ ಈ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ರಾಹುಲ್ ಗಾಂಧಿ ಅವರು ಸತತ ಆರು ತಿಂಗಳ ಕಾಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ 6.60 ಲಕ್ಷ ಮತದಾರರ ಮಾಹಿತಿಯನ್ನು ಪರಿಶೀಲನೆ ಮಾಡಿ ಮತದಾನದ ಅಕ್ರಮವನ್ನು ಬಯಲಿಗೆಳೆದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕಳೆದ ಚುನಾವಣೆ ಜನರಿಗೆ ದ್ರೋಹ ಮಾಡಿದ ಚುನಾವಣೆ. ದೇಶದಲ್ಲಿ ಸಂವಿಧಾನ ಉಳಿಸಿ, ವಯಸ್ಕರಿಗೆ ಸಿಕ್ಕಿರುವ ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವ ರಕ್ಷಣೆ ಮಾಡುವುದು ನಮ್ಮ ಪ್ರಯತ್ನ. ಆದರೆ ಮೋದಿ ಹಾಗೂ ಅಮಿತ್ ಶಾ ಅವರು ಜನ ಮತ ನೀಡದಿದ್ದರೂ ಮತಗಳ್ಳತನದ ಮೂಲಕ ಚುನಾವಣೆ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ” ಎಂದರು.

“ಈ ಮತಗಳ್ಳತನಕ್ಕೆ ಚುನಾವಣಾ ಆಯೋಗವನ್ನೂ ಬಳಸಿಕೊಳ್ಳುತ್ತಿದ್ದಾರೆ. ಇದು ಕಳ್ಳತನದ ಸರ್ಕಾರ. ಇದಕ್ಕೆ ನೈತಿಕ ಬಲ ಇಲ್ಲ. ಇವರು ಸರ್ಕಾರದಲ್ಲಿ ಮುಂದುವರಿಯಲು ಹಕ್ಕಿಲ್ಲ. ಮೋದಿ ಅವರು ದೇಶದ ಅಭಿವೃದ್ಧಿಗೆ ಎಲ್ಲಾ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಇದು ಅಪ್ಪಟ ಸುಳ್ಳು. ದೇಶದ ಎಲ್ಲಾ ರಾಜ್ಯಗಳಲ್ಲಿ ನಾವು ಇಂತಹ ಚುನಾವಣಾ ಅಕ್ರಮಗಳನ್ನು ಹುಡುಕಿ ತೆಗೆಯುತ್ತಿದ್ದೇವೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶ ಸೇರಿ ಎಲ್ಲೆಡೆ ಮತದಾನದ ಹಕ್ಕನ್ನು ದುರ್ಬಳಕೆ ಮಾಡಿಕೊಂಡು, ನಕಲಿ ಮತದಾನದ ಮೂಲಕ ಮೋದಿ ಅವರು ದೇಶ ಆಳುತ್ತಿದ್ದಾರೆ” ಎಂದು ಹೇಳಿದರು.

“ಆರು ವರ್ಷಗಳ ಹಿಂದೆ 2019ರಲ್ಲಿ ನಾನು ಮೊದಲ ಬಾರಿಗೆ ಸೋತಾಗಲೇ ನಾನು ಹೇಳಿದ್ದೆ. ನನ್ನ ಜೀವನದಲ್ಲಿ 12 ಚುನಾವಣೆ ಗೆದ್ದ ನಾನು ಸೋಲು ಕಂಡ ಏಕೈಕ ಚುನಾವಣೆ ಅದಾಗಿತ್ತು. ಆಗಲೂ ಇದೇ ರೀತಿ ಅಕ್ರಮ ಮಾಡಿದ್ದರು. ಆದರೆ ನಮಗೆ ಆಗ ಇದರ ಅರಿವಾಗಿರಲಿಲ್ಲ. ಆಗ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ನಕಲಿ ಮತದಾನ ಮಾಡಿ ನಮ್ಮನ್ನು ಟಾರ್ಗೆಟ್ ಮಾಡಿದ್ದರು. ಈಗ ಎಲ್ಲವೂ ಬಯಲಿಗೆ ಬಂದಿದೆ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಬಹಳ ಸೂಕ್ಷ್ಮವಾಗಿ ಈ ಎಲ್ಲಾ ಅಕ್ರಮವನ್ನು ಹೊರಗೆ ತಂದಿದ್ದಾರೆ. ಹೀಗಾಗಿ ಪಕ್ಷದ ನಾಯಕರು ಮತದಾನದ ಬಗ್ಗೆ ಗಮನಹರಿಸಬೇಕು. ಇದು ನಿಮ್ಮ ಜವಾಬ್ದಾರಿಯಾಗಿದೆ” ಎಂದರು.

“ಮೋದಿ ಅವರು ಬೇರೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಇಡಿ, ಸಿಬಿಐ, ಐಟಿ ಮೂಲಕ ಬೆದರಿಸಿ ಸರ್ಕಾರ ರಚಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಬಹುಮತ ಇಲ್ಲದಿದ್ದರೂ ಪಕ್ಷಗಳನ್ನು ಒಡೆದು, ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡುತ್ತಿದ್ದಾರೆ. ಈ ಹಿಂದೆ ಕರ್ನಾಟಕದಲ್ಲಿ, ಮಹಾರಾಷ್ಟ್ರ, ಗೋವಾ, ಮಣಿಪುರ ಸೇರಿ ಎಲ್ಲ ಕಡೆ ಅದೇ ಆಗಿದೆ. ಇವವರು ಎಂದೂ ಈ ರಾಜ್ಯಗಳಲ್ಲಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬರಲಿಲ್ಲ. ಈಗಲೂ ಅದೇ ಚಾಳಿ ಮುಂದುವರಿಸುತ್ತಿದ್ದಾರೆ. ನಾವು ಅವರಿಗೆ ಬುದ್ಧ ಕಲಿಸಬೇಕಿದೆ” ಎಂದು ಹೇಳಿದರು.

“2024ರ ಚುನಾವಣೆಯನ್ನು ಮೋದಿ ಅಂಡ್ ಕಂಪನಿ ಗೆದ್ದಿಲ್ಲ. ಕಳ್ಳತನದಿಂದ ಚುನಾವಣೆ ಗೆದ್ದಿದ್ದು, ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ಅವರ ಅಕ್ರಮ ಹೊರಗೆ ತಂದು ಜನರಿಂದ ಛೀಮಾರಿ ಹಾಕಿಸುತ್ತೇವೆ. ಜನ ಬೆಂಬಲ ಇಲ್ಲದ ಪ್ರಧಾನಮಂತ್ರಿ ಇಂದು ನಮ್ಮ ದೇಶದಲ್ಲಿದ್ದಾರೆ. ಅವರನ್ನು ಕೆಳಗಿಳಿಸುವುದಷ್ಟೇ ಅಲ್ಲ, ಅವರಿಗೆ ಬುದ್ಧಿ ಕಲಿಸಬೇಕು. ಅವರು ದೇಶದ ಆರ್ಥಿಕತೆ ಕೆಡಿಸುತ್ತಿದ್ದು, ಜನ ನೆಮ್ಮದಿ ಕಳೆದುಕೊಳ್ಲುವಂತಾಗಿದೆ. ಅವರು ನೋಟು ರದ್ದತಿ ಸೇರಿದಂತೆ ಅನೇಕ ತಪ್ಪು ಮಾಡಿ ದೇಶವನ್ನು ನಾಶ ಮಾಡಿದ್ದಾರೆ. ಈಗ ಮತ್ತೊಂದು ತಪ್ಪು ಮಾಡಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಎಲ್ಲರೂ ಈ ಚುನಾವಣೆ ಕಳ್ಳತನ ಕಂಡು ಹಿಡಿದು ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.

“ಸೋಮವಾರ ಎಲ್ಲಾ ಸಂಸದರು ಕೇಂದ್ರ ಚುನಾವಣಾ ಆಯೋಗದ ಮುಂದೆ ಪ್ರಸ್ತಾವನೆ ನೀಡುತ್ತೇವೆ. ಆಮೂಲಕ ನಿಮ್ಮ ಸಮ್ಮುಖದಲ್ಲಿ ಇಂತಹ ಅಕ್ರಮ ನಡೆದಿದೆ, ನೀವು ಇದಕ್ಕೆ ಬೆಂಬಲ ನೀಡುತ್ತಿದ್ದು, ಅಧಿಕಾರದಲ್ಲಿ ಮುಂದುವರಿಯಲು ನೀವು ಅರ್ಹರಲ್ಲ ಎಂದು ಸಂದೇಶ ನೀಡುತ್ತೇವೆ. ಇಂಡಿಯಾ ಮೈತ್ರಿಕೂಟ ನಾಯಕರನ್ನು ಕರೆದು ಒಗ್ಗಟ್ಟಿನ ಸಂದೇಶ ರವಾನಿಸಿದ್ದೇವೆ. ನಾವು ಒಂದಾಗಿದ್ದರೆ ಮಾತ್ರ ಮೋದಿ ಅವರ ಕಳ್ಳಾಟ ತಡೆಯಲು ಸಾಧ್ಯ. ಇವರನ್ನು ಅಧಿಕಾರದಿಂದ ಇಳಿಸುವುದು ಅತ್ಯಂತ ಮಹತ್ವದ ವಿಚಾರ. ಬಿಜೆಪಿಯವರು ಅಧಿಕಾರ ಇದೆ ಎಂದು ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ” ಎಂದರು.

“ನಮ್ಮ ಮತ ಕಸಿದುಕೊಂಡ ನಂತರ ನಮ್ಮ ಅಸ್ತಿತ್ವವೇ ಇರುವುದಿಲ್ಲ. ಹೀಗಾಗಿ ಆಗಸ್ಟ್ 9, 1942ರಂದು ಮಹಾತ್ಮಾ ಗಾಂಧಿ ಅವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದರು. ಅದೇ ರೀತಿ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ನಾವು ‘ಮಾಡು ಇಲ್ಲವೇ ಮಡಿ’ ಎಂಬ ಧ್ಯೇಯದೊಂದಿಗೆ ಹೋರಾಟ ಮಾಡಬೇಕಾಗಿದೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments