ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನೀಡಿದ ದೂರಿನ ಅನ್ವಯ ಆಗುತ್ತಿರುವ ಎಸ್‌ಐಟಿ ತನಿಖೆಯ ಬೆನ್ನಲ್ಲೇ ಮತ್ತೊಬ್ಬ ದೂರುದಾರ ಸಾಕ್ಷಿ ಹೇಳಲು ಮುಂದೆ ಬಂದಿದ್ದಾನೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ದೂರು ದಾಖಲಿಸಲು ಮತ್ತು ಮಹತ್ವದ ಸಾಕ್ಷ್ಯಗಳನ್ನು ಸಲ್ಲಿಸಲು ಹೊಸ ಸಾಕ್ಷಿಯೊಬ್ಬರು ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ಬಂದಿದ್ದಾನೆ.
ಇದೇ ವೇಳೆ ಸುದ್ದಿಗಾರರ ಜಯಂತ ಟಿ ಎಂದು ಹೇಸರು ಹೇಳಿಕೊಂಡು ಮಾತನಾಡಿದ ಸಾಕ್ಷಿದಾರ ಮತ್ತು ದೂರುದಾರ, “13-15 ವರ್ಷದ ಬಾಲಕಿಯನ್ನು ಹೂತು ಹಾಕಿದ್ದನ್ನು ನಾನು ಕಣ್ಣಾರೇ ನೋಡಿರುವೆ. ಯಾರು ಕೊಲೆ ಹೂತು ಹಾಕಿದ್ದಾರೆ ಎಂಬುದು ನನಗೆ ಗೊತ್ತಿದೆ. ಆ ಜಾಗವೂ ಸಹ ನಾನು ತೋರಿಸಬಲ್ಲೆ” ಎಂದಿದ್ದಾರೆ.
ದಿಢೀರ್ ಆಗಿ ಸೃಷ್ಟಿಯಾಗಿರುವ ಸಾಕ್ಷಿಯೇ ನೀವು ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಇಲ್ಲ, ಎಸ್‌ಐಟಿ ತನಿಖೆ ನೋಡಿ ನಾನು ಸಾಕ್ಷಿ ಹೇಳಲು ಮುಂದೆ ಬಂದಿರುವೆ. ಧರ್ಮಸ್ಥಳದಲ್ಲಿ ಕೊಲೆಗಳಾಗುತ್ತಿದ್ದವು ಎಂದು ಈ ಹಿಂದೆಯೇ ನಾನು ವೇದಿಕೆಗಳ ಮೇಲೆ ಹೇಳಿದ್ದೆ. ಜೀವಭಯದ ಕಾರಣಕ್ಕೆ ಠಾಣೆ ಮೆಟ್ಟಿಲು ಏರಿರಲಿಲ್ಲ. ಈಗ ಎಸ್‌ಐಟಿ ಮೇಲೆ ನಂಬಿಕೆ ಬಂದಿದೆ. ಧರ್ಮಸ್ಥಳದ ಕೊಲೆಗಳ ಬಗ್ಗೆ ನನಗಿರುವ ಮಾಹಿತಿಯನ್ನು ಎಸ್‌ಐಟಿ ಜೊತೆ ಹಂಚಿಕೊಳ್ಳಲಿದ್ದೇನೆ. ಇನ್ನೂ ನಾಲೈದು ಜನ ಸಾಕ್ಷಿ ಹೇಳಲು ಮುಂದೆ ಬರಲಿದ್ದಾರೆ” ಎಂದು ಹೇಳಿದರು.
ಧರ್ಮಸ್ಥಳ ಗ್ರಾಮದ ಅರಣ್ಯ ಭಾಗದಲ್ಲಿ ಹೂತಿರುವ ಶವಗಳ ಹುಡುಕಾಟ ನಡೆಯಿತ್ತಿದೆ. ಮೊದಲ ಸಾಕ್ಷಿದಾರ 13 ಸ್ಥಳಗಳನ್ನು ಗುರುತು ಮಾಡಿದ್ದಾನೆ. ಆ ಪೈಕಿ 6ನೇ ಸ್ಥಳದಲ್ಲಿ ಈಗಾಗಲೇ ಮೃತ ದೇಹದ ಕುರುಹುಗಳು ಲಭಿಸಿವೆ.