ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್‌ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಾಂತಿ ಅವರ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಈ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಡಿಜಿ ಹಂತದ ಅಧಿಕಾರಿಯನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿತು. ಪ್ರಣಬ್ ಮೊಹಾಂತಿಯವರನ್ನು ನೇಮಿಸಿದ್ದೇವೆ. ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಅವರ ಹೆಸರಿದೆ. ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಪೋಸ್ಟಿಂಗ್‌ಗಳನ್ನು ಮಾಡಲಾಗುತ್ತಿದೆ. ಇದು ಸರಿ ಕಾಣಿಸುವುದಿಲ್ಲ. ಪ್ರಕರಣದಲ್ಲಿ ಸರ್ಕಾರದ ಆಸಕ್ತಿ ಏನಿದೆ? ಎಸ್‌ಐಟಿ ಯಾಕೆ ರಚಿಸುತ್ತಿದ್ದೆವು ಎಂದು ಪ್ರಶ್ನಿಸಿದ ಅವರು, ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು ಎಂಬುದಷ್ಟೆ ಸರ್ಕಾರಕ್ಕೆ ಮುಖ್ಯ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಎಸ್‌ಐಟಿ ಮಾಡಿದ್ದೇವೆ. ಎಸ್‌ಐಟಿ ತನಿಖೆ ನಡೆಸಿ, ವರದಿ ಸಲ್ಲಿಸಿದ ನಂತರ ಸತ್ಯಾಸತ್ಯತೆ ಹೊರಬರುತ್ತವೆ. ನಮಗೆ ಬೇಕಿರುವುದು ಅಷ್ಟೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಯಾರನ್ನು ರಕ್ಷಣೆ ಮಾಡಬೇಕು, ಯಾರನ್ನೋ ಸಿಕ್ಕಿಹಾಕಿಸಬೇಕು ಎಂಬ ಅಜೆಂಡಾ ಸರ್ಕಾರಕ್ಕೆ ಖಂಡಿತವಾಗಿಯೂ ಇಲ್ಲ. ಯಾರು ಕೂಡ ಅದನ್ನು ತಪ್ಪು ಭಾವನೆಯಿಂದ ನೋಡಬಾರದು. ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಹೇಳಿದ್ದೇವೆ. ಇದು ಸರ್ಕಾರಕ್ಕೆ ಇರುವ ಅಜೆಂಡಾ ಎಂದು ಹೇಳಿದರು.
ಒಳಮೀಸಲಾತಿ ಕುರಿತಂತೆ ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ವರದಿ ಕೊಡುವ ಮೊದಲು ನಾವು ಚರ್ಚೆ ಮಾಡೋಣ. ಈ ವಿಚಾರದಲ್ಲಿ ಯಾರಿಗು ಸಹ ಬೇಸರ ಆಗುವುದು ಬೇಡ. ನಮ್ಮಲ್ಲಿರುವ ಅಭಿಪ್ರಾಯಗಳನ್ನು ಸರಿ ಮಾಡಿಕೊಳ್ಳೋಣ ಎಂಬ ನಿಟ್ಟಿನಲ್ಲಿ ಸಭೆ ಕರೆದಿದ್ದೇನೆ. ಚರ್ಚೆ ನಂತರ ಅಭಿಪ್ರಾಯಗಳು ಗೊತ್ತಾಗಲಿವೆ ಎಂದು ತಿಳಿಸಿದರು.
ಒಳಮೀಸಲಾತಿ ವರದಿ ಪೂರ್ಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಲ್ಲಿಸಿಲ್ಲ. ಸದ್ಯದಲ್ಲಿ ಸಲ್ಲಿಸುತ್ತೇವೆ ಎಂದಿದ್ದಾರೆ. ಒಳ ಪಂಗಡಗಳ ಬಗ್ಗೆ ಚರ್ಚೆ ಮಾಡಿಕೊಳ್ಳುವುದು ಸೂಕ್ತ. ಒಳಮೀಸಲಾತಿ ಕುರಿತು ಶಾಸಕರು ಮಾತಾಡಿಕೊಳ್ಳುವುದಿಕ್ಕೆ ಯಾರು ಬ್ರೆಕ್ ಹಾಕುವುದಿಲ್ಲ ಎಂದರು.
ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್‌ಒಪಿ ಮಾಡಿಕೊಂಡಿದ್ದಾರೆ. ಅದನ್ನು ಇಂಪ್ಲಿಮೆಂಟ್ ಮಾಡುತ್ತಾರೆ. ಇಲಾಖೆಗೆ ಅನೇಕ ಅನುಭವಗಳಾಗಿವೆ. ಆದ್ದರಿಂದ ಲಕ್ಷಾಂತರ ಜನ ಸೇರುವ ನಿರೀಕ್ಷೆ ಮಾಡುವುದಿಲ್ಲ. ಹತ್ತಿರದ ಜಿಲ್ಲೆಗಳಿಂದ ಮುಖಂಡರು, ಕಾರ್ಯಕರ್ತರು ಬರುತ್ತಾರೆ ಎಂದು ಅಧ್ಯಕ್ಷರು ತಿಳಿಸುತ್ತಾರೆ. ಎಲ್ಲ ರೀತಿಯ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ವತಿಯಿಂದ ತೆಗೆದುಕೊಳ್ಳುತ್ತೇವೆ. ರಾಹುಲ್ ಗಾಂಧಿಯವರಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಕೊಟ್ಟಿರುತ್ತಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸ್ಪೀಪರ್ ಸೆಲ್‌ಗಳಿವೆ ಎಂದು ಈ ಹಿಂದೆ ವರದಿಯಾಗಿತ್ತು. ತನಿಖಾ ಏಜೆನ್ಸಿ ಪತ್ತೆಹಚ್ಚಿದ್ದಾರೆ. ಅಲ್‌ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮಹಿಳೆ ಕರ್ನಾಟಕದವಳಲ್ಲ. ಈ ಬಗ್ಗೆ ತನಿಖಾ ಸಂಸ್ಥೆಯವರು ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿಸಿದರು.
ಮೈಸೂರಿನಲ್ಲಿ ಎಂಡಿಎಂಎ ತಯಾರಿಸುತ್ತಿದ್ದ ಆರೋಪಿಗಳು ಇಪ್ಪತ್ತು ದಿನದ ಹಿಂದೆ ಬಂದಿದ್ದರು. ಮುಂಬೈನಲ್ಲಿ ಆರೋಪಿಯನ್ನು ಹಿಡಿದಾಗ ಸುಳಿವು ಆಧರಿಸಿ ಬಂದಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಹ ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ, ನಮ್ಮ ಪೊಲೀಸರು ಬೇರೆ ರಾಜ್ಯಗಳಿಗೆ ಹೋಗಿ ಆರೋಪಿಗಳನ್ನು ಹಿಡಿದುಕೊಂಡು ಬರುತ್ತಾರೆ. ಇದು ದೇಶದಾದ್ಯಂತ ನಡೆಯುವ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರದಲ್ಲಿ ಇಲಾಖೆ ವತಿಯಿಂದ ಟೋಯಿಂಗ್ ಆರಂಭಿಸುತ್ತೇವೆ. ಈ ಹಿಂದೆ ಗುತ್ತಿಗೆ ನೀಡಲಾಗಿತ್ತು. ಈ ಬಾರಿ ಪೊಲೀಸರೇ ಟೋಯಿಂಗ್ ಮಾಡುತ್ತಾರೆ. ಯಾವುದೇ ಕಂಪನಿಗೆ ಗುತ್ತಿಗೆ ನೀಡುವುದಿಲ್ಲ. ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್‌ಗೆ ಸಮಸ್ಯೆಯಾಗುತ್ತಿದೆ. ಎಲ್ಲಿ ಪಾರ್ಕಿಂಗ್ ಆಗಬಾರದು ಎಂಬ ನಿಯಮ ಇರುತ್ತದೆಯೋ, ಜನರು ಅಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಅಂತ ಸಂದರ್ಭದಲ್ಲಿ ಎನು ಮಾಡಬೇಕು. ಜನ ಓಡಾಡಲು ರಸ್ತೆ ಮಾಡಿದ್ದಾರೆ. ಪಾರ್ಕಿಂಗ್ ಮಾಡಲು ಅಲ್ಲ. ಈ ಹಿಂದೆ ಬೆಂಗಳೂರು ನಗರ ಉಸ್ತುವಾರಿ ಸಚಿವನಾದ್ದಾಗ ಸಂದರ್ಭದಲ್ಲಿಯೂ ಈ ಪ್ರಶ್ನೆ ಬಂದಿತ್ತು ಎಂದ ಅವರು, ಜನರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಸೂಚಿಸುತ್ತೇನೆ. ಜಟಾಪಟಿಯಾದರೆ ಕಾನೂನು ಇಲ್ಲವೇ? ಎಂದು ಅವರು ಹೇಳಿದರು.