ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಸಾರಿಗೆ ನೌಕರರಿಗೆ 38 ತಿಂಗಳಿನಿಂದ ಭತ್ಯೆ ಮತ್ತು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದು, ಇದರಂತೆ ರಾಜ್ಯದ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು.
ಆದರೆ ಇದೀಗ ಸಾರಿಗೆ ನೌಕರರು ಪ್ರತಿಭಟನೆ ನಡೆಸದಂತೆ ಕಾರ್ಮಿಕ ಇಲಾಖೆ ಎಸ್ಮಾ ಜಾರಿ ಮಾಡಿದೆ. ಇದು ಮುಂದಿನ ಆರು ತಿಂಗಳು ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಮುಷ್ಕರವನ್ನು ನಿಷೇಧಿಸಲಾಗಿದೆ.
ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆ ನಡೆಸಿ ಪರಿಸ್ಥಿತಿ ನಿಯಂತ್ರಣ ತಪ್ಪುತ್ತದೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದರೆ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಮುಖಭಂಗ ಬರುವ ಹಂತಕ್ಕೆ ಪ್ರತಿಭಟನೆಗಳು ಬಂದಾಗ ಸರ್ಕಾರ ಎಸ್ಮಾ ಜಾರಿ ಮಾಡುವ ಅಧಿಕಾರವಿದೆ.
ಎಸ್ಮಾ ಎಂದರೆ ಕಡ್ಡಾಯ ಕೆಲಸ. ಸಂವಿಧಾನದಲ್ಲಿ ತಿಳಿಸಿರುವಂತೆ, 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ. ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಶಿಕ್ಷೆಯನ್ನು ನೀಡುವ ಸಾಧ್ಯತೆಯೂ ಇರುತ್ತದೆ ಎಂಬ ಉಲ್ಲೇಖವಿದೆ.
ಎಸ್ಮಾ ಜಾರಿಯಲ್ಲಿದ್ದ ಮೇಲೆ ಅದನ್ನು ಧಿಕ್ಕರಿಸಿ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಉದ್ಯೋಗಿಗಳು ಹಠ ಮುಂದುವರಿಸಿದರೆ ಕೊನೆಯ ಅಸ್ತ್ರವಾಗಿ ಎಸ್ಮಾ ಜಾರಿಗೊಳಿಸುತ್ತವೆ.