ಮೂರುವರೇ ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಜಮೀನು ಭೂಸ್ವಾಧೀನ ಅಂತಿಮ ಅಧಿಸೂಚನೆ ರದ್ದಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ಆಂಧ್ರಪ್ರದೇಶ ನೀಡಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಪುತ್ರ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಟ್ವೀಟ್ ಮಾಡಿ, “1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್ನ್ನು ಕರ್ನಾಟಕ ಸರ್ಕಾರ ರದ್ದು ಮಾಡಿರುವುದು ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ನೋಡಬಾರದು” ಎಂದು ಪ್ರಶ್ನಿಸಿದ್ದಾರೆ.
“ಪ್ರೋತ್ಸಾಹ ಧನ ಸೇರಿ 8,000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇವೆ” ಎಂದು ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳಿಗೆ ಕರೆಕೊಟ್ಟಿದ್ದಾರೆ.
ಬೆಂಗಳೂರು ಆಂಧ್ರಪ್ರದೇಶದ ಗಡಿಗೆ ಸಮೀಪದಲ್ಲಿರುವುದಿರಂದ ಈ ಭಾಗದಲ್ಲೇ ಏರೋಸ್ಪೇಸ್ ಉದ್ಯಮಗಳಿಗೆ ನೆಲೆ ನೀಡುವ ಯೋಚನೆ ಆಂಧ್ರಪ್ರದೇಶದ್ದು. ಈ ಆಹ್ವಾನವನ್ನು ಉದ್ಯಮಿಗಳು ಸ್ವೀಕರಿಸುತ್ತಾರಾ? ಅಥವಾ ಕರ್ನಾಟಕದಲ್ಲೇ ಬೇರೆ ಕಡೆ ಭೂಮಿ ಪಡೆಯುತ್ತಾರಾ ಎಂಬುದು ಕಾದು ನೋಡಬೇಕು.


