Homeಕರ್ನಾಟಕದೇವನಹಳ್ಳಿ ಭೂಸ್ವಾಧೀನ | ನುಡಿದಂತೆ ನಡೆದ ಸಿದ್ದು ಸರ್ಕಾರ, ರೈತರು ನಿರಾಳ

ದೇವನಹಳ್ಳಿ ಭೂಸ್ವಾಧೀನ | ನುಡಿದಂತೆ ನಡೆದ ಸಿದ್ದು ಸರ್ಕಾರ, ರೈತರು ನಿರಾಳ

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಸ್ಥಾಪಿಸಲು ಉದ್ದೇಶಿರುವ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ಗಾಗಿ ಜಮೀನು ನೀಡಲು ರೈತರು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಭೂ ಸ್ವಾಧೀನ ಕೈ ಬಿಡಲು ನಿರ್ಧರಿಸಿದೆ.

ಈ ಮೂಲಕ ಕಳೆದ ಮೂರುವರೆ ವರ್ಷಗಳಿಂದ ನಡೆದಿರುವ ರೈತರ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಮಂಗಳವಾರ (ಜು.15) ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ತಕ್ಷಣದಿಂದ ಅನ್ವಯವಾಗುವಂತೆ ಅಧಿಸೂಚನೆ ರದ್ದು ಮಾಡಲಾಗಿದೆ.

ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ಹೋರಾಟ ಆರಂಭವಾಗಿತ್ತು. ಅಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಹೋಗಿ ರೈತರ ಪರ ಮಾತನಾಡಿ ಬೆಂಬಲಿಸಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಿಸಿದ್ದರು.

ಅಂದು ಹೋರಾಟ ಬೆಂಬಲಿಸಿದ್ದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಆಗಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿ ದೇವನಹಳ್ಳಿ ಚಲೋ ವನ್ನು ಜೂ.25ಕ್ಕೆ ಆಯೋಜಿಸಿದ್ದರು. ಧರಣಿ ಸ್ಥಳದಲ್ಲಿ ಹೋರಾಟಗಾರರ ಬಂಧನವಾಗಿತ್ತು. ನಂತರ ಸಿಎಂ ಸಿದ್ದರಾಮಯ್ಯ ಜು.4ಕ್ಕೆ ಸಭೆ ನಡೆಸಿ ಅಂತಿಮ ತೀರ್ಮಾನ ಹೇಳಲು 10 ದಿನಗಳ ಸಮಯಾವಕಾಶ ಕೇಳಿದ್ದರು.

“ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು. ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ” ಎಂದು ಸಭೆಯ ಬಳಿಕ ಸಿಎಂ ಹೇಳಿದ್ದಾರೆ.

“ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳ ಭೂಸ್ವಾಧೀನ ಕೈಬಿಟ್ಟ ಸರ್ಕಾರಕ್ಕೆ ರೈತರು – ಹೋರಾಟಗಾರರು ಧನ್ಯವಾದ ಸಲ್ಲಿಸಿದ ಭಾವನಾತ್ಮಕ ಕ್ಷಣಗಳಿಗೆ ಇಂದು ನಾಡು ಸಾಕ್ಷಿಯಾಗಿದೆ. ಸುದೀರ್ಘ ಹೋರಾಟ ಫಲ ನೀಡಿದ ನೆಮ್ಮದಿಯಭಾವ ರೈತರದ್ದಾದರೆ, ನುಡಿದಂತೆ ನಡೆದ ಸಾರ್ಥಕತೆ ನಮ್ಮ ಸರ್ಕಾರದ್ದು” ಎಂದು ಸಿಎಂ ಸಿದ್ದರಾಮಯ್ಯ ಸಂತಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನದ ವಿರುದ್ಧ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ 1,198 ದಿನಗಳನ್ನು ಪೂರೈಸಿದ್ದು, ಕೊನೆಗೆ ಸುಖಾಂತ್ಯ ಕಂಡಿದೆ. ಕರ್ನಾಟಕದ ಇತಿಹಾಸದಲ್ಲೇ ಇಂತಹದೊಂದು ದೀರ್ಘ ಚಳವಳಿ ಇತ್ತೀಚಿನ ದಶಕಗಳಲ್ಲಿ ನಡೆದಿಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿ 1,777 ಎಕರೆ ಜಮೀನನ್ನು ಕೆಐಎಡಿಬಿ ಮೂಲಕ ಸ್ವಾಧೀನಕ್ಕೆ ಸರಕಾರ 2021ರ ಆಗಸ್ಟ್‌ 27 ರಂದು ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. 2022ರ ಜನವರಿಯಲ್ಲಿ 13 ಹಳ್ಳಿಗಳ ರೈತರಿಗೆ ನೋಟಿಸ್‌ ನೀಡಲಾಯಿತು. ನೋಟಿಸ್‌ ಸುಟ್ಟು ಹಾಕಿದ ರೈತರು ಅದೇ ವರ್ಷದ ಜನವರಿ 28ರಂದು ಅಧಿಕೃತವಾಗಿ ಹೋರಾಟ ಪ್ರಾರಂಭಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments