ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ (87) ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾದೇವಿ ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿಯಲ್ಲಿ ಒಬ್ಬರು. ಅವರನ್ನು ‘ಅಭಿನಯ ಸರಸ್ವತಿ’ ಎಂದೇ ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಹೆಸರುವಾಸಿಯಾಗಿದ್ದರು.
ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ `ಮಹಾಕವಿ ಕಾಳಿದಾಸ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರ.
1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಇವರ ಕಲಾಸೇವೆಗೆ 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗೆ ಭಾಜನಾರಾಗಿದ್ದಾರೆ.
ಮುಖ್ಯಮಂತ್ರಿ ಸೇರಿ ಗಣ್ಯರ ಸಂತಾಪ
ಭಾರತೀಯ ಚಿತ್ರರಂಗದ ಖ್ಯಾತ ಚಿತ್ರನಟಿ ಬಿ.ಸರೋಜಾದೇವಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತಾ ಮಾತನಾಡಿದ ಮುಖ್ಯಮಂತ್ರಿಗಳು, “ಬಿ.ಸರೋಜಾದೇವಿಯವರು ಕನ್ನಡ ನಾಡು ಕಂಡ ಪ್ರತಿಭಾವಂತ ಕಲಾವಿದರಾಗಿದ್ದರು. ಬಹುಭಾಷಾ ನಟಿಯಾಗಿದ್ದ ಅವರು ಅಪ್ರತಿಮ ಕಲಾವಿದರಾಗಿದ್ದು, ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದುಃಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ” ತಿಳಿಸಿದರು.
ಕನ್ನಡ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದ್ದರು: ಕುಮಾರಸ್ವಾಮಿ
“ಕನ್ನಡದ ಹಿರಿಯ ನಟಿ, ಬಹುಭಾಷಾ ತಾರೆ ಬಿ.ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ದುಃಖವಾಯಿತು. ಮೇರುನಟರಾದ ಡಾ. ರಾಜ್ ಕುಮಾರ್ ಅವರು ಸೇರಿದಂತೆ ಭಾರತದ ಎಲ್ಲಾ ಭಾಷೆಗಳ ದಿಗ್ಗಜ ನಾಯಕ ನಟರೆಲ್ಲರ ಜತೆ ನಟಿಸಿದ್ದ ಸರೋಜಾದೇವಿ ಅವರು, ಅಭಿಮಾನಿಗಳ ಪಾಲಿಗೆ ಅಭಿನಯ ಸರಸ್ವತಿ ಆಗಿದ್ದರು. ಅವರ ಅನನ್ಯ ಅಭಿನಯ ನಮ್ಮೆಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತಿತ್ತು. ಕನ್ನಡ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸುವಲ್ಲಿ ಅಪಾರ ಕಾಣಿಕೆ ನೀಡಿರುವ ಅವರು; ಕಿತ್ತೂರು ಚೆನ್ನಮ್ಮ, ಬಬ್ರುವಾಹನ ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಗಲಿಕೆ ಚಿತ್ರರಂಗಕ್ಕೆ, ನಾಡಿಗೆ ಬಹುದೊಡ್ಡ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.


