“ದೇವನಹಳ್ಳಿ ವಿಷಯಕ್ಕೆ ಬರೋಣ. ನೋಡಿ ಮುಖ್ಯಮಂತ್ರಿಗಳು ಕರೆದು ಸಭೆ ಮಾಡಿದರು. ಆ ಸಭೆಯಲ್ಲಿ ನಾವು ಜನಪರವಾಗಿ ನಿರ್ಧಾರ ತಗೋಬೇಕು ಅಂತ ಮಾಡಿದ್ದೇವೆ. ಆದರೆ ಒಂದಿಷ್ಟು ಕಾನೂನು ತೊಡಕುಗಳು ಇವೆ. ಅದನ್ನು ನಾವು ಬಗೆಹರಿಸಿಕೊಂಡು ಜು.15ಕ್ಕೆ ಸರ್ಕಾರದ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ. ಅದರ ಬಗ್ಗೆ ಯೋಚನೆ ಮಾಡಿ ಎಂ ಬಿ ಪಾಟೀಲರೇ ಎಂದು ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
“ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರಕಾಶ್ ರೈ ಹೋರಾಟ ಯಾಕೆ? ಅವರು ಕರ್ನಾಟಕದಲ್ಲಿ ಮಾತ್ರವಲ್ಲ. ಯುಪಿಯಲ್ಲೂ ಹೋರಾಟ ಮಾಡಲಿ, ಅಸ್ಸಾಂನಲ್ಲೂ, ಅಷ್ಟೇ ಯಾಕೆ ಗುಜರಾತ್ನಲ್ಲೂ ಹೋರಾಟ ಮಾಡಲಿ” ಎಂದಿದ್ದ ಎಂ ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, “ಪಾಟೀಲರೇ, ಇದು ಕರ್ನಾಟಕ ರೈತರ ಸಮಸ್ಯೆ. ಕರ್ನಾಟಕದಲ್ಲಿಯೇ ಮಾಡಬೇಕು. ದೇವನಹಳ್ಳಿ ರೈತರ ಸಮಸ್ಯೆ ಬಗ್ಗೆ ಬೇರೆ ಕಡೆ ಪ್ರತಿಭಟಿಸಲು ಆಗುತ್ತದಾ? ಇಲ್ಲಿಯೇ ಹೋರಾಟ ಮಾಡಬೇಕು” ಎಂದಿದ್ದಾರೆ.
“ನಾವು ದೇಶದ ಹಲವು ಕಡೆ ಹೋರಾಟ ಮಾಡಿದ್ದೇವೆ. ತಮಿಳುನಾಡಿನ ರೈತರ ಪರ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದೇನೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಹೋರಾಟ ಮಾಡಿದಾಗಲೂ ಭಾಗವಹಿಸಿದ್ದೆ. ಮಣಿಪುರದಲ್ಲೂ ಅನ್ಯಾಯವಾದಾಗಲೂ ಮಾತನಾಡಿದ್ದೆ” ಎಂದು ಹೇಳಿದ್ದಾರೆ.
“ಗುಜರಾತ್ ಬಗ್ಗೆ ಹೇಳಿದ್ದೀರಿ, ಗುಜರಾತಿನ ಮಹಾಪ್ರಭು ಪ್ರಧಾನಿ ಮೋದಿ ಅವರನ್ನು ನಿಮಗಿಂತ ಹೆಚ್ಚು ಪ್ರಶ್ನೆ ಮಾಡುವವನು ನಾನೇ. ಆಯಾ ಹೋರಾಟಗಳಲ್ಲಿ ಮಾತನಾಡುತ್ತಿರುತ್ತೇನೆ. ಏಕೆಂದರೆ ನಾವು ನಾವ ಪಕ್ಷದವರು ಅಲ್ಲ. ಜನರೇ ನಮಗೆ ಪಕ್ಷ. ನೀವು ಒಂದು ಪಕ್ಷದವರು. ಹೀಗಾಗಿ ಜನರಿಗೆ ಎಲ್ಲೇ ಸಮಸ್ಯೆ ಆದ್ರೂ ಮಾತನಾಡುವುದು ನನ್ನ ಜವಾಬ್ದಾರಿ” ಎಂದು ತಿಳಿಸಿದ್ದಾರೆ.
“ದೇವನಹಳ್ಳಿ ನಿಮ್ಮದೇ ಒಂದಿಷ್ಟು ಪುಡಾರಿಗಳು ಹೋಗಿ ನಿಮಗೆ 3 ಕೋಟಿ ರೂ. ಕೊಡುತ್ತೇವೆ ಅಂತ ಆಮಿಷವೊಡ್ಡುತ್ತಿದ್ದಾರೆ. ನಿಮಗೆ ಅವರು ಪರಿಚಯ ಇದ್ದರೆ ಆ ತಪ್ಪು ಮಾಡಬೇಡಿ ಅಂತ ಹೇಳಿ. ಕಾನೂನು ರೀತಿ ಒಂದು ಪರಿಹಾರ ಇದೆ. ನೀವು ಕುಳಿತು ಮಾತನಾಡಿ. ನಿಮಗೆ ಸಮಸ್ಯೆ ಬಗೆಹರಿಯದಿದ್ದರೆ ನಮ್ಮ ಹತ್ರ ಬನ್ನಿ. ನಮ್ಮಲ್ಲೂ ತಜ್ಞರು ಇದ್ದಾರೆ” ಎಂದು ಎದುರೇಟು ನೀಡಿದ್ದಾರೆ.
“ನಿವೃತ್ತ ನ್ಯಾಯಾಧೀಶ ಗೋಪಾಲಗೌಡರು ನಮ್ಮ ಜೊತೆ ಇದ್ದಾರೆ. ಅವರು ಬೆಂಗಳೂರಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಎಕರೆ ಭೂಮಿ ರೈತರಿಗೆ ಸೇರಬೇಕು ಅಂತ ಐತಿಹಾಸಿಕ ತೀರ್ಪು ನೀಡಿದವರು. ನಿಮಗೆ 15ನೇ ತಾರೀಖಿನಲ್ಲಿ ಇತ್ಯರ್ಥವಾಗದಿದ್ದರೆ ನಮ್ಮನ್ನು ಭೇಟಿಯಾಗಿ. ನಾವು ಸಲಹೆ ಕೊಡುತ್ತೇವೆ. ಸ್ವಲ್ಪ ಜವಾಬ್ದಾರಿಯಿಂದ ನಡೆದುಕೊಳ್ಳಿ ಎಂ ಬಿ ಪಾಟೀಲರೇ, ಮತ್ತೆ ಸಿಗೋಣ ಮಾತನಾಡೋಣ” ಎಂದು ನಗುತ್ತಲೇ ಉತ್ತರಿಸಿದ್ದಾರೆ.