Homeಕರ್ನಾಟಕಗಾಂಧಿ ಕುಟುಂಬದ ತೇಜೋವಧೆಗೆ 'ನ್ಯಾಷನಲ್ ಹೆರಾಲ್ಡ್' ಪ್ರಕರಣ ಬಳಕೆ: ಹರಿಪ್ರಸಾದ್‌ ಕಿಡಿ

ಗಾಂಧಿ ಕುಟುಂಬದ ತೇಜೋವಧೆಗೆ ‘ನ್ಯಾಷನಲ್ ಹೆರಾಲ್ಡ್’ ಪ್ರಕರಣ ಬಳಕೆ: ಹರಿಪ್ರಸಾದ್‌ ಕಿಡಿ

ಬಿಜೆಪಿ ಪಕ್ಷದ ಅಂಗಸಂಸ್ಥೆಗಳಂತೆ ವರ್ತಿಸುತ್ತಿರುವ ಇ.ಡಿ ಸಂಸ್ಥೆ, ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ “ಗಾಂಧಿ ಕುಟುಂಬ”ವನ್ನು ನಡೆಸಿಕೊಳ್ಳುತ್ತಿರುವ ರೀತಿ ದ್ವೇಷ ರಾಜಕೀಯ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಾಮಾನ್ಯವಾದದ್ದು ಎಂದು ವಿಧಾನ ಪರಿಷತ್‌ ಸದಸ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್‌ ಹೇಳಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವ್ಯವಹಾರ ನಡೆದಿದೆ ಎಂಬುವುದು ಕಪಲೋಕಲ್ಪಿತ ಆರೋಪಗಳು ಮಾತ್ರವಲ್ಲದೇ, ಸಾಕ್ಷ್ಯಾಧಾರಗಳಿಲ್ಲದೇ ಇ.ಡಿ ನಡೆಸುತ್ತಿರುವ ವಾದ ಸುಳ್ಳಿಗೆ ಸುಳ್ಳನ್ನೇ ಸಾಕ್ಷಿಗಳಂತೆ ಪ್ರತಿಬಿಂಬಿಸುತ್ತಿದೆ” ಎಂದಿದ್ದಾರೆ.

“ಯಂಗ್ ಇಂಡಿಯಾ” ಒಂದು ಲಾಭ ರಹಿತ ಸಂಸ್ಥೆ ಎಂಬುದು ಸ್ಪಷ್ಟ. ಲಾಂಭಂಶವನ್ನು ಪಡೆಯದೆ ಸಾರ್ವಜನಿಕ ಸೇವಾ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಯಂಗ್ ಇಂಡಿಯಾದ ನಿರ್ದೇಶಕರಾಗಲಿ, ಷೇರುದಾರರಾಗಲಿ ಯಾವುದೇ ಲಾಂಭಂಶವನ್ನು ಪಡೆಯುವಂತಿಲ್ಲ ಎಂಬ ನಿಯಮವಿದೆ. ಹಾಗೂ ಷೇರುದಾರರಿಗೆ ಯಾವುದೇ ಸಂಬಳವನ್ನು ಕೂಡ ನೀಡಲಾಗುವುದಿಲ್ಲ. ಹಾಗಿದ್ದೂ ಕೋಟ್ಯಾಂತರ ಅವ್ಯವಹಾರವಾಗಿದೆ ಎಂದು ಇ.ಡಿ‌ ಇಲಾಖೆ ಅರೋಪಿಸಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.

“ಒಂದು ಪೈಸೆಯನ್ನೂ ಅಕ್ರಮವಾಗಿ ನ್ಯಾಷನಲ್ ಹೆರಾಲ್ಡ್ ಜೊತೆಗೆ ಯಂಗ್ ಇಂಡಿಯಾ ಸಂಸ್ಥೆ ವಹಿವಾಟು ನಡೆಸಿಲ್ಲ. ಯಾವ ಆಸ್ತಿಯನ್ನು ವಶಕ್ಕೂ ಪಡೆದುಕೊಂಡಿಲ್ಲ. 2013 ರಿಂದ 2025ರವರೆಗೆ ಕಾಲಕ್ಕೆ ತಕ್ಕಂತೆ ಇ.ಡಿ ಇಲಾಖೆ ತನ್ನ ವಾದವನ್ನು ಬದಲಾಯಿಸುತ್ತಾ ಪೊಳ್ಳು ವಾದ ಮಂಡಿಸುತ್ತಿದೆ. ಬಿಜೆಪಿ ನಾಯಕನ ಪುರಾವೇ ಇಲ್ಲದ ದೂರಿನ ನಂತರ ಇಲ್ಲಿವರೆಗೂ ಯಾವುದೇ ತನಿಖಾ ಅಧಿಕಾರಿ ದಾಖಲೆ ಸಮೇತ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯೊಂದಿಗೆ ನಡೆದಿರುವ ಪ್ರಕ್ರಿಯೆಗಳಿಗೆ ಪ್ರತಿಯೊಂದಕ್ಕೂ ದಾಖಲೆಗಳಿರುವುದು ಇ.ಡಿ ಇಲಾಖೆಯ ತನಿಖೆಯಿಂದಲೇ ಬಹಿರಂಗವಾಗಿರುವ ಸತ್ಯ” ಎಂದು ಹೇಳಿದ್ದಾರೆ.

“ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಬಲಿದಾನ ಮಾಡಿರುವ ಕುಟುಂಬವನ್ನು ತೇಜೋವಧೆ ಮಾಡುವ ದುರದ್ದೇಶದಿಂದಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು “ಗಾಂಧಿ ಕುಟುಂಬದ”ವಿರುದ್ಧ ಬಳಸಿಕೊಳ್ಳುತ್ತಿರುವುದು ದೇಶದ ಜನರಿಗೆ ಅರಿಕೆಯಾಗಿದೆ. ನೆಹರೂ ಅವರ ನಾಯಕತ್ವದಲ್ಲಿ 5000 ಸ್ವತಂತ್ರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಭವ್ಯ ಇತಿಹಾಸ ಹೊಂದಿರುವ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ 1937 ರಲ್ಲಿ ಪ್ರಾರಂಭವಾದ ಪತ್ರಿಕಾ ಸಂಸ್ಥೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ, ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿ ಪಕ್ಷ ಸುಳ್ಳು ಮೊಕದ್ದಮೆಗಳನ್ನು ಹೂಡಿರುವುದು ಅಸಹ್ಯ ರಾಜಕೀಯದ ಪರಮಾವಧಿ. ದೇಶದ ಜನ ಗಾಂಧಿ ಕುಟುಂಬದ ಜೊತೆಗೆ ನಿಂತಿದೆ, ಸಂವಿಧಾನ, ನ್ಯಾಯಂಗದ ಮೇಲಿನ ನಂಬಿಕೆ‌ ಕಳೆದುಕೊಂಡಿಲ್ಲ. ಸತ್ಯ ಹೊರಬರುವಾಗ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಂತೆ ವರ್ತಿಸುತ್ತಿರುವ ಇ.ಡಿ,ಐಟಿ,ಗಳಂತಹ ಸಂಸ್ಥೆಗಳಿಗೆ ಕಪಾಳಮೋಕ್ಷವಾಗುವ ಕಾಲ ದೂರವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments