ಮುಖ್ಯಮಂತ್ರಿಗಳು ಐಎಎಸ್ ಅಧಿಕಾರಿಗಳ ವಿರುದ್ಧ ಅವಮಾನ ಆಗುವಂತೆ ನಡೆದುಕೊಂಡಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಆಗ ಅವರು ಯಾಕೆ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮಗಳನ್ನು ಗಮನಿಸಿದ್ದೇನೆ. ರವಿಕುಮಾರ್ ಅವರು ಈ ಸಂಬಂಧ ಸ್ಪಷ್ಟನೆಯನ್ನೂ ನೀಡಿದ್ದಾರೆ. ತದನಂತರ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್‍ನವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾಗಿ ಮಾಹಿತಿ ಬಂದಿದೆ. ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನಿನ್ನೆ ಹೊರಟ್ಟಿಯವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಎಫ್‍ಐಆರ್ ದಾಖಲಾಗಿದೆ” ಎಂದರು.
“ರವಿಕುಮಾರ್ ಅವರ ವಿಚಾರ ಒಂದೆಡೆ ಇರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಬೆಳಗಾವಿಯಲ್ಲಿ ಬಹಿರಂಗ ಸಭೆಯಲ್ಲಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆಯಲು ಹೋದರಲ್ಲವೇ? ಆಗ ಈ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಇದೇ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಸರಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳನ್ನು ‘ಏಯ್ ಎದ್ದೇಳು’ ಎಂದು ಅಪಮಾನ ಮಾಡಿದ್ದರು. ಆಗ ಐಎಎಸ್ ಅಸೋಸಿಯೇಷನ್ ಎಲ್ಲಿ ಹೋಗಿತ್ತು ಎಂದು ಕೇಳಿದರು. ಇದು ಕೂಡ ಚರ್ಚೆ ಆಗಲಿ” ಎಂದು ಹೇಳಿದರು.
“ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಳ ಜನ ಪ್ರಾರ್ಥನೆ ಮಾಡುತ್ತಿದ್ದಾರೆ, ಪ್ರಯತ್ನ ಮಾಡುತ್ತಿದ್ದಾರೆ. ಸುರ್ಜೇವಾಲಾರನ್ನು ಕರೆಸಿ ಭೂಮಿ ಪೂಜೆ, ಗುದ್ದಲಿ ಪೂಜೆ ಮಾಡಿಸಲಿದ್ದಾರೆ. ಬರುವ ದಿನಗಳಲ್ಲಿ ಏನೇನಾಗುತ್ತೋ ಕಾದು ನೋಡೋಣ. ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಯಾರು ಮುಖ್ಯಮಂತ್ರಿ ಎಂಬುದು ನಮಗೆ ಮುಖ್ಯವಲ್ಲ; ಕಾಂಗ್ರೆಸ್ ಸರಕಾರದ ಬಗ್ಗೆ ರಾಜ್ಯದ ಜನರು ಛೀಮಾರಿ ಹಾಕುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ” ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ತಿರುಕನ ಕನಸು
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಖರ್ಗೆ ಅವರು ಹೇಳಿರುವುದು ಮೂರ್ಖತನದ ಹೇಳಿಕೆ. ಪ್ರಿಯಾಂಕ್ ಖರ್ಗೆ ರಾತ್ರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ” ಎಂದು ವ್ಯಂಗ್ಯವಾಡಿದರು.