‘ಸಿದ್ದರಾಮಯ್ಯ ಲಕ್ಕಿ, ಸಿಎಂ ಲಾಟರಿ ಹೊಡೆದುಬಿಟ್ಟಿತು’ ಎಂಬ ಹೇಳಿಕೆಗೆ ಆಳಂದ ಶಾಸಕ ಬಿ ಆರ್ ಪಾಟೀಲ್ ಸ್ಪಷ್ಟನೆ ನೀಡಿದ್ದು, “ನನ್ನ ಮಾತನ್ನು ತಪ್ಪಾಗಿ ಬಿಂಬಿಸಲಾಗಿದೆ. ಇದು ನನ್ನ ಹಾಗೂ ಸಿದ್ದರಾಮಯ್ಯರ ನಡುವಿನ ಸಂಬಂಧ ಹಾಳು ಮಾಡಲು ಮಾಡಿರುವ ಕೆಲಸ” ಎಂದು ಆರೋಪಿಸಿದ್ದಾರೆ.
“ನಾನು ಕೆಆರ್ ಪೇಟೆಯಲ್ಲಿ ಆತ್ಮೀಯರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಅವರ ವಿಷಯ ಪ್ರಸ್ತಾಪ ಆಯ್ತು. ಆ ವೇಳೆ ಕೆಲವು ವಿಷಯ ಬಗ್ಗೆ ಮಾತನಾಡುತ್ತ, ಸಿದ್ದರಾಮಯ್ಯ ಅವರಿಗೆ ಲಕ್ಕಿ ಲಾಟರಿ ಇತ್ತು ಸಿಎಂ ಆದರು ಎಂದಿದ್ದೆ. ಆದರೆ, ನಾನು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿಸಿದ್ದೇನೆ ಎಂಬುದು ಸಂಪೂರ್ಣ ಸುಳ್ಳು” ಎಂದು ಸ್ಪಷ್ಟನೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
“ಸೋನಿಯಾ ಗಾಂಧಿಯನ್ನು ಭೇಟಿ ಮಾಡುವಾಗ ನಾನು ಸಿದ್ದರಾಮಯ್ಯ ಅವರ ಜೊತೆಗಿದ್ದೆ. ಈ ಸರಿ ಭೇಟಿ ಬೇಡ ಅಂತ ಸಿದ್ದರಾಮಯ್ಯ ಅವರು ಹೇಳಿದಾಗ ನಾನೇ ಒತ್ತಾಯ ಮಾಡಿ, ಸರ್ ಭೇಟಿ ಮಾಡಿ ಎಂದು ಹೇಳಿದ್ದೆ. ಆಗ ಅವರು ಹೋಗಿ ಭೇಟಿ ಮಾಡಿದರು” ಎಂದು ತಿಳಿಸಿದ್ದಾರೆ.
“ಸಿದ್ದರಾಮಯ್ಯ ಒಬ್ಬ ಜನನಾಯಕ. ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ನಡುವಿನ ಆತ್ಮೀಯ ಸಂಬಂಧ ಹಾಳು ಮಾಡುವುದಕ್ಕೆ ಕೆಲವರು ಉದ್ದೇಶ ಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ. ನಾವು 9 ಜನ ಶಾಸಕರು ಜೆಡಿಎಸ್ ಬಿಟ್ಟು ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರಿದ್ದೆವು. ಕಾಂಗ್ರೆಸ್ ಕೂಡಾ ಅವರ ಜನಬೆಂಬಲ ನೋಡಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು” ಎಂದು ಸ್ಪಷ್ಟಪಡಿಸಿದ್ದಾರೆ.