ಬಿಜೆಪಿಯವರಿಗೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದು ಮತ್ತು ರಾಜಕೀಯವಾಗಿ ರಾಜೀನಾಮೆ ಕೇಳುವುದು ಅಭ್ಯಾಸವಾಗಿದೆ. ಬಿಜೆಪಿ ಎಲ್ಲದರಲ್ಲೂ ರಾಜಕೀಯ ಮಾಡೇ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.
ಅವರು ಇಂದು ಗೌರಿಬಿದನೂರಿನ ಬೊಮ್ಮಸಂದ್ರ ಗ್ರಾಮ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ವತಿಯಿಂದ ಮುಖ್ಯಮಂತ್ರಿಗಳ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, “ಕುಂಭಮೇಳದಲ್ಲಿ 40-50 ಜನ ಕಾಲ್ತುಳಿತದಲ್ಲಿ ಸತ್ತರು. ಆಗ ಅಲ್ಲಿನ ಮುಖ್ಯಮಂತ್ರಿಗಳ ರಾಜೀನಾಮೆ ಕೇಳಿದರೇ? ಸೇತುವೆಯೊಂದು ಉದ್ಘಾಟನೆಯಾದ ದಿನವೇ ಬಿದ್ದು 140 ಜನ ಸತ್ತರು ಆಗ ಪ್ರಧಾನಿಗಳ ರಾಜೀನಾಮೆ ಕೇಳಿದರೇ? ಗೋಧ್ರಾ ಹತ್ಯಾಕಾಂಡದಲ್ಲಿ ಎಷ್ಟು ಜನ ಸತ್ತರು. ಆಗ ಗುಜರಾತ್ ಮುಖ್ಯಮಂತ್ರಿಗಳು ಯಾರಾಗಿದ್ದರು? ಅವರ ರಾಜೀನಾಮೆ ಕೇಳಿದರೇ? ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸರಬರಾಜು ಮಾಡದೇ 23 ಜನ ಸತ್ತಾಗ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದರೆ” ಎಂದು ಪ್ರಶ್ನಿಸಿದರು.
“ಇ.ಡಿ ಯವರು ದಾಳಿ ಮಾಡಿದ್ದು ಯಾವುದೇ ಕಾನೂನಿನ ಉಲ್ಲಂಘನೆಯಾಗಿದ್ದರೆ ಅದಕ್ಕೆ ನಾವು ಬೆಂಬಲಿಸುವುದಿಲ್ಲ. ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲಿ. ಕಾನೂನಿನ ಅನುಷ್ಠಾನಕ್ಕೆ ಅಡ್ಡಿಪಡಿಸುವುದಿಲ್ಲ” ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸಾಮಾಜಿಕ ,ಆರ್ಥಿಕ, ಶೈಕ್ಷಣಿಕ ಸಮೀಕ್ಷೆ: ಮರು ಗಣತಿ
“ಜಾತಿ ಗಣತಿ ಬಗ್ಗೆ ಕೆಲವು ದೂರುಗಳು ಬಂದಿವೆ. ಸಮೀಕ್ಷೆ ನಡೆದು 10 ವರ್ಷಗಳಾಗಿದ್ದು, ಹಳೆಯದಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಕಡಿಮೆ ಅವಧಿಯಲ್ಲಿ ಮರುಗಣತಿ ಕೈಗೊಳ್ಳಲು ಸೂಚಿಸಿದ್ದಾರೆ. ವರದಿಯನ್ನು ನಾವು ತಿರಸ್ಕರಿಸುವುದಿಲ್ಲ. ತಾತ್ವಿಕವಾಗಿ ವರದಿಯನ್ನು ಒಪ್ಪಿಕೊಳ್ಳಲಾಗಿದೆ” ಎಂದರು.
ಪಕ್ಷದ ವರಿಷ್ಠರ ತೀರ್ಮಾನ
ಕಾಂತರಾಜ ಆಯೋಗ ವರದಿ ಬಗ್ಗೆ ಪಕ್ಷದ ವರಿಷ್ಠರ ನಿರ್ಧಾರ ಮುಖ್ಯಮಂತ್ರಿಗಳಿಗೆ ನಿರಾಸೆ ತಂದಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಪಕ್ಷದ ವರಿಷ್ಠರು ನಿರ್ಧಾರ ಮಾಡಿದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಇದು ನಮ್ಮ ತೀರ್ಮಾನವಲ್ಲ ಎಂದರು.
30 ದಿನಗಳಲ್ಲಿ ವರದಿ
ಕಾಲ್ತುಳಿತ ಪ್ರಕರಣದಲ್ಲಿ ಅನೇಕ ಆಯೋಗ ರಚನೆಯಾಗಿದ್ದು ಇವು ತಾರ್ಕಿಕ ಅಂತ್ಯ ಕಾಣುವುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, “ತನಿಖೆ ಕೈಗೊಳ್ಳಲು ಏಕ ವ್ಯಕ್ತಿ ಆಯೋಗ ರಚನೆ ಮಾಡಿದ್ದು ಅದು 30 ದಿನಗಳಲ್ಲಿ ವರದಿ ಸಲ್ಲಿಸಲಿದೆ. ಈ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ” ಎಂದರು.
ಎರಡು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ
ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲಿ ಮುಕ್ತಾಯವಾಗಬಹುದು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಈ ಭಾಗದ ಸಚಿವರು, ಶಾಸಕರು, ಹಾಗೂ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.