ಮುಂದಿನ ತಿಂಗಳಿಂದ ರಾಗಿ ಮಾಲ್ಟ್ ಭಾಗ್ಯ ಯೋಜನೆ ಜಾರಿಗೆ ಬರಲಿದ್ದು, ಶಾಲಾ ಮಕ್ಕಳಿಗೆ ನೀಡುವ ಮಾಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಗಂಜಿ ನೀಡಲಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಎನ್ಜಿಒ ಒಂದು ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಅದು ಯಶಸ್ವಿಯಾಗಿದೆ. ಕ್ಷೀರಭಾಗ್ಯದ ಹಾಲಿನ ಜೊತೆ ಇದನ್ನು ಕೊಡಲಾಗುವುದು” ಎಂದರು.
“ಶಾಲಾ ಮಕ್ಕಳಿಗಾಗಿ ನಡೆಸುತ್ತಿರುವ ಮಾಧ್ಯಾಹ್ನದ ಊಟ ಯೋಜನೆ ಚೆನ್ನಾಗಿ ಸಾಗುತ್ತಿದ್ದು, ಮಕ್ಕಳಿಗೆ ಪೌಷ್ಟಿಕಾಹಾರ ನೀಡಲು ಈ ಯೋಜನೆಯನ್ನು ಸರ್ಕಾರ ರೂಪಿಸಿದೆ” ಎಂದು ಹೇಳಿದರು.
ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಬಗ್ಗೆ ಪ್ರತಿಕ್ರಿಯಿಸಿ, “ರಾಜ್ಯದಲ್ಲಿ ಎಸ್ಇಪಿ ಅನುಷ್ಠಾನ ಬೇಗ ಆಗಲಿದ್ದು, ಈಗಾಗಲೇ ಈ ಕುರಿತು ಮೊದಲ ಸಭೆ ನಡೆದಿದೆ. ಎಸ್ಇಪಿ ಜಾರಿ ಮೂಲಕ ಉತ್ತಮ ಶಿಕ್ಷಣ ವ್ಯವಸ್ಥೆ ನಿರ್ಮಾಣ ಆಗಲಿದೆ” ಎಂದು ಭರವಸೆ ವ್ಯಕ್ತಪಡಿಸಿದರು.
“ಎಸ್ಇಪಿಗೆ ರಾಜ್ಯ ಪಠ್ಯ ಕ್ರಮವೋ, ಸಿಬಿಎಸ್ಇ ಪಠ್ಯಕ್ಕೋ ಅಂತ ತಜ್ಞರ ವರದಿ ಬಂದ ಮೇಲೆ ಗೊತ್ತಾಗಲಿದೆ. ನಮ್ಮ ಪಠ್ಯಕ್ರಮ ಸಿಬಿಎಸ್ಇಗಿಂತ ಉತ್ತಮವಾಗಿ ಇರಲಿದೆ. ವರದಿ ಕೈ ಸೇರಿದ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಷಿಸಿ ಅಂತಿಮ ತೀರ್ಮಾನ ಮಾಡುತ್ತೇವೆ” ಎಂದು ವಿವರಿಸಿದರು.