ಭಾನು ಮುಷ್ತಾಕ್ ಮಾನವೀಯತೆ ಮತ್ತು ಭಾರತೀಯತೆಯನ್ನು ಬೆಸೆಯುವ ನೇಕಾರರು. ಇವರಿಗೆ ಬಂದಿರುವ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ನಾಗರಿಕತೆಯ ಬಯಕೆ ಆಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಮತ್ತು ಗಾಂಧಿ ಪ್ರತಿಷ್ಠಾನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಮಾತನಾಡಿದರು.
“ವಿಚ್ಛಿದ್ರಕಾರಿ ಶಕ್ತಿಗಳು, ಮತಾಂದತೆ ಹಾಗೂ ಮೂಲಭೂತವಾದ ಒಟ್ಟಾಗಿ ಬೆಸೆದುಕೊಂಡು ಜಗತ್ತನ್ನು ನಾಶ ಮಾಡುತ್ತಿರುವ ಹೊತ್ತಲ್ಲಿ, ಭಾನು ಮುಷ್ತಾಕ್ ಅವರ ಮಾನವೀಯತೆಯ ಬೆಸುಗೆ ಮತ್ತು ಭಾರತೀಯತೆಯ ಬೆಸುಗೆಗೆ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಬಂದಿದೆ” ಎಂದು ಮೆಚ್ಚುಗೆ ಸೂಚಿಸಿದರು.
“ಸಾಹಿತ್ಯದ ಹೆಸರಿನಲ್ಲಿ ಕೊಡುತ್ತಿರುವ ಈ ಸಂದೇಶವು, ಎಲ್ಲ ಮೂಲಭೂತವಾದಿ ಶಕ್ತಿಗಳಿಗೆ ಕೊಟ್ಟಿರುವ ಕಪಾಳಮೋಕ್ಷ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯ ಧಾರ್ಮಿಕ ದರ್ಪಗಳಿಗೆ ಕೊಟ್ಟಿರುವ ಏಟು ಮತ್ತು ಮಾನವೀಯ ಧರ್ಮಕ್ಕೆ, ಎಲ್ಲಾ ಧರ್ಮದಲ್ಲಿರುವ ಮಾನವೀಯ ವ್ಯಕ್ತಿತ್ವಗಳಿಗೆ ಸಿಕ್ಕಿರುವ ಮನ್ನಣೆ ಕೂಡ ಆಗಿದೆ. ಕೆಲವು ಪ್ರಗತಿಪರ ಲೇಖಕರೇ ಭಾನುಗಿಂತ ದೊಡ್ಡ ಸಾಹಿತಿಗಳಿದ್ದಾರೆ ಎಂದು ಗೊಣಗಿದ್ದು ನನಗೆ ಗೊತ್ತಿದೆ. ನಿಜ, ಭಾನು ಅವರಿಗಿಂತ ಹೆಚ್ಚೆಚ್ಚು ಪುಸ್ತಕ ಪ್ರಕಟಿಸಿದ ಲೇಖಕರಿದ್ದಾರೆ. ಹಾಗೆಯೇ ದೊಡ್ಡ ಮಹಿಳಾ ಲೇಖಕಿಯರು ಬಹಳಷ್ಟು ಇದ್ದಾರೆ. ಸೌಂದರ್ಯ ಮಿಮಾಂಸೆಯ ದೃಷ್ಟಿಯಿಂದ ಭಾನುವನ್ನು ಮೀರಿಸಿದ ಲೇಖಕಿಯರೂ ಇದ್ದಾರೆ, ಅವರಿಗೆ ಪ್ರಶಸ್ತಿ ದೊರಕಿದರೂ ನನಗೆ ವೈಯುಕ್ತಿಕವಾಗಿ ಸಂತೋಷವೇ” ಎಂದರು.
“ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಘೋಷಣೆಯಾದ ಬಳಿಕ ಭಾನು ಅವರ ‘ಒಮ್ಮೆ ಹೆಣ್ಣಾಗು ಪ್ರಭುವೆ’ ಕಥೆಯನ್ನು ನಾನು ಓದಿದೆ. ಇದರಲ್ಲಿ ಅಂತಃಕರಣವಿರುವ ದೇವರೂ ಸಹ ಗಂಡಾಳಿಕೆಯನ್ನು ಎತ್ತಿಹಿಡಿಯುವುದಾದರೇ, ಅವನು ದೇವರು ಹೇಗಾಗಲು ಸಾಧ್ಯ? ಹೆಣ್ಣನ್ನು ಮನುಷ್ಯಳಾಗಿ ಒಪ್ಪಿಕೊಳ್ಳುವ ಶಕ್ತಿ ಇರುವ ದೇವರನ್ನು ಒಪ್ಪಿಕೊಳ್ಳಬಹುದು, ಇಂತಹ ಶಕ್ತಿಯನ್ನು ಅಂತಿಮ ಶಕ್ತಿಯೆಂದು ಒಪ್ಪಿಕೊಳ್ಳಬಹುದು, ಹೆಣ್ಣಿನ ಸಂವೇದನೆಯನ್ನು ಬೆಳೆಸಿಕೊಳ್ಳಲು ದೈವವಾದರೂ ಪ್ರೇರೇಪಿಸಲಿ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.
ಲಂಕೇಶ್ ಅವರಿಗೇ ರಾಜಕೀಯ ಪಾಠ ಮಾಡಿದ್ದರು
“ಭಾನು ಅವರು ಒಬ್ಬ ಅನುಭವಿ ರಾಜಕಾರಣಿ ಕೂಡ ಹೌದು. ಏಕೆಂದರೆ ಇವರು ಲಂಕೇಶ್ ಅವರಿಗೂ ರಾಜಕೀಯ ತಿಳಿವಳಿಕೆ ಹೇಳಿದ್ದರು. ನಗರಸಭೆ ಚುನಾವಣೆಗೆ ಸ್ಫರ್ಧಿಸಿದ್ದ ಬಾನು ಅವರಿಗೆ ರಾಜಕೀಯ ರಣರಂಗದ ಪರಿಚಯವೂ ಇದೆ. ಲಂಕೇಶ್ ಪ್ರಗತಿ ರಂಗ ಮಾಡುವ ಹೊತ್ತಲ್ಲಿ, “ರಾಜಕೀಯ ಪಕ್ಷ ಮಾಡಬೇಡಿ. ಪ್ರಗತಿರಂಗವನ್ನು ಶುರು ಮಾಡಬೇಡಿ. ಅದು ವಿಫಲವಾಗಲಿದೆ, ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದಾಗ ಲಂಕೇಶ್ ಅದನ್ನು ಒಪ್ಪುವುದಿಲ್ಲ. ತಾವು ನಗರಸಭೆ ಚುನಾವಣೆಗೆ ನಿಂತಾಗ ಉಂಟಾದ ಕಷ್ಟವನ್ನು ಹೇಳಿದ ಭಾನು, ಪಕ್ಷ ಕಟ್ಟಿ ಇಡೀ ರಾಜ್ಯದಲ್ಲಿ ಪಕ್ಷವನ್ನು ನಿಭಾಯಿಸುವುದು ಎಷ್ಟು ಕಷ್ಟವಾಗಬಹುದು ಎಂದು ವಿವರಿಸುತ್ತಾರೆ” ಎಂದು ತಿಳಿಸಿದರು.
“ಬಾಬಾ ಬುಡನ್ ಗಿರಿ ಘಟನೆಯಾಗಿರಲಿ, ಯಾವುದೇ ಹೋರಾಟವಾಗಿರಲಿ ಎಲ್ಲಾ ಹೊತ್ತಿನಲ್ಲಿಯೂ ಭಾನು ಅವರು ಸಾಮಾಜಿಕ, ರಾಜಕೀಯ ಕಾರ್ಯಕರ್ತೆಯಾಗಿ ಗಟ್ಟಿಯಾಗಿ ನಿಂತಿದ್ದಾರೆ. ಪತ್ರಕರ್ತೆಯಾಗಿ, ಬರಹಗಾರರಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಮಹಿಳೆಯಾಗಿ, ಮುಸ್ಲಿಂ ಮಹಿಳೆಯಾಗಿ ಬಾನು ಅವರಿಗೆ ಬಹಳ ದೊಡ್ಡ ಸ್ಥಾನವಿದೆ ಎನ್ನುವುದನ್ನು ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಇಡೀ ಜಗತ್ತಿಗೆ ಸಾರಿ ಹೇಳಿದೆ” ಎಂದರು.
ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಬಹುರೂಪಿ ಜಿ.ಎನ್.ಮೋಹನ್, ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ವಿಜಯವಾಣಿ ಪತ್ರಿಕೆ ಸಂಪಾದಕರಾದ ಚನ್ನೇಗೌಡರು, ಗಾಂಧಿ ಭವನದ ಹೆಚ್.ಸಿ. ದಿನೇಶ್ ಅವರು ಉಪಸ್ಥಿತರಿದ್ದರು.


