ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ. ಬದಲಾಗಿ ಭಾರತದ ರಾಜಕೀಯ, ಸಾಮಾಜಿಕ ಹಾಗೂ ಮಿಲಿಟರಿ ಇಚ್ಛಾಶಕ್ತಿಯ ಸಂಕೇತ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಲಕ್ನೋದಲ್ಲಿ ಭಾನುವಾರ ಬ್ರಹ್ಮೋಸ್ ಏರೋಸ್ಪೇಸ್ ಇಂಟಿಗ್ರೇಷನ್ ಮತ್ತು ಪರೀಕ್ಷಾ ಸೌಲಭ್ಯವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, “ಭಯೋತ್ಪಾದನೆಯ ವಿರುದ್ಧ ದೇಶದ ದೃಢ ಸಂಕಲ್ಪ ಮಾಡಿದೆ” ಎಂದರು.
“ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗಿನ ಭಾರತ ವಿರೋಧಿ ಶಕ್ತಿಗಳಿಗೆ ನಿರ್ಣಾಯಕ ಹೊಡೆತ ನೀಡಿವೆ. ಇಂದು ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ. ನಾವು ನಿರಂತರವಾಗಿ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
“ನಮ್ಮ ದೇಶದ ಮೇಲೆ ದಾಳಿ ಮಾಡಿ ಅನೇಕ ಕುಟುಂಬಗಳ ಸದಸ್ಯರನ್ನು ಹೊಡೆದ ಭಯೋತ್ಪಾದಕ ಸಂಘಟನೆಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಸದೆಬಡಿದು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಿವೆ. ಇಡೀ ರಾಷ್ಟ್ರ ಇಂದು ಭಾರತೀಯ ಪಡೆಗಳ ಶೌರ್ಯಕ್ಕೆ ವಂದಿಸುತ್ತಿದೆ” ಎಂದರು.
“ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ನೆಲೆಯನ್ನು ನಾಶಮಾಡುವ ಉದ್ದೇಶದಿಂದ ಭಾರತೀಯ ಪಡೆಗಳು ಆಪರೇಷನ್ ಸಿಂಧೂರ್ ಪ್ರಾರಂಭಿಸಿದವು. ನಾವು ಎಂದಿಗೂ ಪಾಕಿಸ್ತಾನದ ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ, ಪಾಕಿಸ್ತಾನವು ಭಾರತೀಯ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದ್ದಲ್ಲದೆ, ದೇವಾಲಯಗಳು ಮತ್ತು ಗುರುದ್ವಾರಗಳ ಮೇಲೂ ದಾಳಿ ಮಾಡಲು ಪ್ರಯತ್ನಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಪಡೆಗಳು ಧೈರ್ಯ ಮತ್ತು ಸಂಯಮ ಪ್ರದರ್ಶಿಸಿದವು. ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ದಾಳಿ ಮಾಡಿ ಸೂಕ್ತ ಉತ್ತರ ನೀಡಿದವು” ಎಂದು ಹೇಳಿದರು.
“ಭಾರತ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡಾಗಲೆಲ್ಲ ಗಡಿಯಾಚೆಗಿನ ಪ್ರದೇಶಗಳು ಭಯೋತ್ಪಾದಕರು ಮತ್ತು ಅವರ ಮಾಸ್ಟರ್ಮೈಂಡ್ಗಳಿಗೆ ಸುರಕ್ಷಿತವಾಗಿರುವುದಿಲ್ಲ ಎಂಬುದನ್ನು ಈ ಕಾರ್ಯಾಚರಣೆ ಮತ್ತೆ ತೋರಿಸಿದೆ” ಎಂದು ತಿಳಿಸಿದರು.
“ನಾವು ನಮ್ಮ ಕಾರ್ಯಾಚರಣೆಗಳನ್ನು ಗಡಿಯ ಸಮೀಪವಿರುವ ಮಿಲಿಟರಿ ನೆಲೆಗಳಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯವರೆಗೂ ಭಾರತದ ಮಿಲಿಟರಿ ಕಾರ್ಯಾಚರಣೆಯ ಪ್ರತಿಧ್ವನಿ ಕೇಳಿಬಂದಿದೆ. ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಯತ್ನಿಸುವವರಿಗೆ ಏನಾಗುತ್ತದೆ ಎಂಬುದನ್ನು ಇಡೀ ಜಗತ್ತು ನೋಡಿದೆ” ಎಂದರು.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪ್ರತಿಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಪ್ರಾರಂಭಿಸಿದೆ.