ಕಾಂಗ್ರೆಸ್ ಪಕ್ಷವು ಜಾತಿ ಗಣತಿ ನಡೆಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತದೆ. ಇಲ್ಲಿಯವರೆಗೆ ಸರಕಾರವು ಜಾತಿಗಣತಿಯನ್ನು ನಿರಾಕರಿಸುತ್ತಲೇ ಬಂದಿತ್ತು, ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, “ಜಾತಿ ಗಣತಿಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಆದರೆ ಅದನ್ನು ಯಾವಾಗ ಮಾಡಲಾಗುತ್ತದೆ ಎಂಬುದರ ಕುರಿತು ನಮಗೆ ಸಮಯಸೂಚಿ ಬೇಕು. ತೆಲಂಗಾಣ ಮತ್ತು ಬಿಹಾರ ರಾಜ್ಯಗಳು ಮಾಡಿರುವ ಜಾತಿ ಗಣತಿಗಳು ಇದಕ್ಕೆ ಮಾದರಿಯಾಗಿವೆ” ಎಂದು ಹೇಳಿದರು.
ಮೀಸಲಾತಿಯ ಮೇಲಿನ ಶೇಕಡಾ 50 ರ ಮಿತಿಯನ್ನು ತೆಗೆದುಹಾಕಬೇಕೆಂಬ ಪಕ್ಷದ ಬೇಡಿಕೆಯನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದರು. ಜಾತಿ ಗಣತಿಗೆ ಬಜೆಟ್ ನಿಗದಿಪಡಿಸಬೇಕು. ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
“ಜಾತಿ ಜನಗಣತಿ ಇದು ಮೊದಲ ಹೆಜ್ಜೆ. ಕಾಂಗ್ರೆಸ್ ಪಕ್ಷ ಇದರ ಸುತ್ತ ಹೊಸ ದೃಷ್ಟಿಕೋನವನ್ನು ಹೊಂದಿದ್ದು, ನಮ್ಮ ದೃಷ್ಟಿಕೋನ, ಅವರು ಅಳವಡಿಸಿಕೊಂಡಿದ್ದಕ್ಕೆ ಸಂತೋಷವಿದೆ. ಜಾತಿ ಜನಗಣತಿಯ ಮೂಲಕ ಹೊಸ ಅಭಿವೃದ್ಧಿ ಮಾದರಿಯನ್ನು ತರುವುದು ನಮ್ಮ ಮುಂದಿನ ಗುರಿಯಾಗಿದೆ. ಈ ಗುರಿ ಕೇವಲ ಮೀಸಲಾತಿಗೆ ಸೀಮಿತವಾಗಿಲ್ಲ, ಈ ಸುತ್ತ ಪ್ರಮುಖ ಪ್ರಶ್ನೆಗಳನ್ನು ಎತ್ತುವುದರ ಬಗ್ಗೆಯೂ ನಾವು ಸ್ಪಷ್ಟತೆಯಲ್ಲಿದ್ದೇವೆ. ಅದು ಒಬಿಸಿಗಳು, ದಲಿತರು, ಆದಿವಾಸಿಗಳು – ಈ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹೇಗೆ ಭಾಗಿಯಾಗಲಿದ್ದಾರೆ ಎನ್ನುವ ಬಗ್ಗೆ ನಮಗೆ ಪ್ರಶ್ನೆಗಳಿವೆ” ಎಂದು ಹೇಳಿದರು.