ಹೊಸ ಮನೆಗಳಿಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುತ್ತಿರುವುದು ಮತ್ತು ಸ್ಮಾರ್ಟ್ ಮೀಟರ್‌ಗಳ ಬೆಲೆ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ
ತರಾಟೆಗೆ ತೆಗೆದುಕೊಂಡಿದೆ.
ಹೊಸದಾಗಿ ನಿರ್ಮಾಣಗೊಂಡಿರುವ ತಮ್ಮ ಮನೆಗೆ ಸ್ಮಾರ್ಟ್ ಮೀಟರ್ ಹಾಕಿಸಿಕೊಳ್ಳುವಂತೆ ಒತ್ತಾಯಿಸಿ ಬೆಸ್ಕಾಂ ದೊಡ್ಡಬಳ್ಳಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿದ್ದ ನೋಟಿಸ್ ಪ್ರಶ್ನಿಸಿ ಸ್ಥಳೀಯ ನಿವಾಸಿ ಜಯಲಕ್ಷ್ಮೀ ಎಂಬವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾ । ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅಷ್ಟಕ್ಕೂ ವಿದ್ಯುತ್ ಉಚಿತವಾಗಿ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಇದೆಲ್ಲವೂ ಉಚಿತ ಗ್ಯಾರಂಟಿಗಳಿಂದ ಎದುರಾಗಿರುವ ಸಮಸ್ಯೆಗಳೇ ಎಂದು ಸರಕಾರವನ್ನು ತೀಕ್ಷ್ಮವಾಗಿ ಪ್ರಶ್ನಿಸಿದೆ.
ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುತ್ತಿರುವುದು ಹಾಗೂ ಅದಕ್ಕೆ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕ್ರಮದ ಬಗ್ಗೆ ಸರಕಾರ ಮತ್ತು ಬೆಸ್ಕಾಂ ಅನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೇ ಜಯಲಕ್ಷ್ಮೀಗೆ ದೊಡ್ಡಬಳ್ಳಾಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಡಿದ್ದ ನೋಟಿಸ್‌ಗೆ ತಡೆ ನೀಡಿ ಆದೇಶಿಸಿತು.
ವಿಚಾರಣೆ ವೇಳೆ ಪ್ರಕರಣವನ್ನು ಗಮನಿಸಿದ ನ್ಯಾಯಪೀಠ, ಇದೆಲ್ಲವೂ ಉಚಿತ ಗ್ಯಾರಂಟಿಗಳಿಂದ ಎದುರಾಗಿರುವರ ಸಮಸ್ಯೆಗಳೇ ಎಂದು ಸರಕಾರದ ಪರ ವಕೀಲರನ್ನು ಪ್ರಶ್ನಿಸಿತು. ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಏಕಾಏಕಿ ಈ ರೀತಿ ದರ ಏರಿಕೆ ಮಾಡಿದರೆ ಬಡವರು ಎಲ್ಲಿಗೆ ಹೋಗಬೇಕು? ಎಲ್ಲರೂ ಹೆಚ್ಚು ಹಣ ಕೊಟ್ಟು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದರೆ ಬಡವರು ಏನು ಮಾಡಬೇಕು ಎಂದು ಪ್ರಶ್ನಿಸಿತು.