ಅಕ್ರಮ ಮರಳು ದಂಧೆಗೆ ಅವಕಾಶ ಕೊಟ್ಟಿದ್ದೇ ಬಿಜೆಪಿ ಮುಖಂಡರು ಎಂದು ಭಾಗೋಡಿ ಗ್ರಾಮದ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಇಂಗು ತಿಂದ ಮಂಗನಂತಾದ ಬಿಜೆಪಿಗರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ.
ರಾಜ್ಯ ಬಿಜೆಪಿ ಜನಾಕ್ರೋಶ ಯಾತ್ರೆ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದಾಗ ಸಾರ್ವಜನಿಕರಿಂದ ನಿಜವಾದ ಜನಾಕ್ರೋಶ ಸ್ಫೋಟಗೊಂಡಿದ್ದು, ಜನಾಕ್ರೋಶ ಯಾತ್ರೆಯನ್ನು ಮೊಟಕುಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೇರಿ ಪ್ರಮುಖ ನಾಯಕರು ಪಲಾಯನ ಮಾಡಿದ್ದಾರೆ.
ಬಿಜೆಪಿ ವಿರುದ್ಧದ ಜನಾಕ್ರೋಶ ಕುರಿತ ವಿಡಿಯೋವನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಲಬುರಗಿಗೆ ಆಗಮಿಸಿದ ಬಿಜೆಪಿ ನಾಯಕರಿಗೆ ಪ್ರಬುದ್ಧ ನಾಗರಿಕರು ಛೀಮಾರಿ ಹಾಕಿದ್ದಾರೆ” ಎಂದಿದೆ.
“ಜನಾಕ್ರೋಶ ಯಾತ್ರೆ ಎಂಬ ಬೃಹನ್ನಾಟಕ್ಕೆ ಕಲಬುರ್ಗಿಯ ಜನ ಮಂಗಳಾರತಿ ಎತ್ತಿ, ಬಿಜೆಪಿಗರ ಬಣ್ಣ ಬಯಲು ಮಾಡಿ ತಪರಾಕಿ ಕೊಟ್ಟು ಹಿಂದಕ್ಕೆ ಓಡಿಸಿದ್ದಾರೆ. ಜನ ವಿರೋಧ ಎದುರಿಸಲಾಗದೆ ಇಂಗು ತಿಂದ ಮಂಗನಂತೆ ಯಾತ್ರೆ ಮೊಟಕುಗೊಳಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಿಂದಿರುಗಿದ್ದಾರೆ” ಎಂದು ಕಾಂಗ್ರೆಸ್ ಕುಟುಕಿದೆ.
“ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ, ತೆರಿಗೆ ಪ್ರಹಾರ, ರಾಜ್ಯ ಬಿಜೆಪಿಯೊಳಗಿನ ಕುರ್ಚಿ ಕಾದಾಟ ಮರೆಮಾಚಲು ಕಾಂಗ್ರೆಸ್ ಸರ್ಕಾರದ ಮೇಲೆ ಕೆಸರೆಚುವ ಬಿಜೆಪಿಯ ಪ್ರಯತ್ನ ಹಾಸ್ಯಾಸ್ಪದ ಯಾತ್ರೆಯಾಗಿ ಜನರಿಗೆ ಮನೋರಂಜನೆ ನೀಡುತ್ತಿದೆ” ಎಂದು ಲೇವಡಿ ಮಾಡಿದೆ.