ಕರಾವಳಿ ಭಾಗದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದ ಕೊಲೆಗಾರನನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕುಡಚಿಯಲ್ಲಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ನ. 12ರಂದು ಬೆಳಿಗ್ಗೆ ಉಡುಪಿಯ ನೇಜಾರಿನಲ್ಲಿ ನಾಲ್ವರು ಕೊಲೆಗೈದು ಪರಾರಿಯಾಗಿದ್ದ ಹಂತಕನ ಪತ್ತೆಗೆ ರಚಿಸಲಾಗಿದ್ದ ಐದು ವಿಶೇಷ ತಂಡಗಳು ಹಗಲಿರುಳು ಕಾರ್ಯಾಚರಣೆ ಕೈಗೊಂಡು ಖಚಿತವಾದ ಮಾಹಿತಿಯನ್ನು ಆಧರಿಸಿ ರಾಯಭಾಗ ತಾಲ್ಲೂಕಿನ ಕುಡಚಿಯಲ್ಲಿ ಬಂಧಿಸಿ ನಗರಕ್ಕೆ ಕರೆತಂದು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ನೇಜಾರಿನ ಹಸೀನಾ (48), ಅಫ್ನಾನ್ (23), ಅಯ್ನಾಜ್ (20), ಅಸೀಮ್ (20) ಅವರನ್ನು ಚೂರಿಯಿಂದ ಭೀಕರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿ ಕುಡಚಿಯಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್ ಅರುಣ್ ಚೌಗಲೆಯನ್ನು ಮೊಬೈಲ್ ಲೊಕೇಷನ್ ಆಧರಿಸಿ ಜಾಡು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕೆ ಕೊಲೆ ಮಾಡಲಾಗಿತ್ತು ಎಂಬ ಕಾರಣ ಈವರೆಗೂ ತಿಳಿದು ಬಂದಿಲ್ಲ. ಹಂತಕನನ್ನು ಉಡುಪಿಗೆ ಕರೆತರುತ್ತಿರುವ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸುವ ಸಾಧ್ಯತೆ ಇದೇ ಎಂದು ಹೇಳಲಾಗಿದೆ.
ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ನಾಲ್ವರನ್ನು ಕೊಲೆ ಮಾಡಿ, ಮನೆಯ ಯಜಮಾನಿಯ ಅತ್ತೆಗೂ ಗಾಯಗೊಳಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾದ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ. ಆರೋಪಿಯ ವಿಚಾರಣೆಯ ಬಳಿಕ ಕೊಲೆಯ ಹಿಂದಿನ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ.