Homeಕರ್ನಾಟಕಸರ್ಕಾರಿ ಕಚೇರಿಯಲ್ಲಿ ಜನ್ಮದಿನ ಆಚರಣೆ, ಇಂಜಿನಿಯರ್​​ಗಳು ಸೇರಿ ಐವರ ಅಮಾನತು

ಸರ್ಕಾರಿ ಕಚೇರಿಯಲ್ಲಿ ಜನ್ಮದಿನ ಆಚರಣೆ, ಇಂಜಿನಿಯರ್​​ಗಳು ಸೇರಿ ಐವರ ಅಮಾನತು

ಸರ್ಕಾರಿ ಕಚೇರಿಯೊಂದರಲ್ಲಿ ತಮ್ಮ ಇಲಾಖೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಡಗೂಡಿ ಜನ್ಮದಿನ ಆಚರಿಸಿ ಆಚರಿಸಿ, ಸಂಭ್ರಮಿಸಿದ ಆರೋಪದ ಮೇಲೆ ಇಂಜಿನಿಯರ್​ಗಳು ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಸಹಾಯಕ ಇಂಜಿನಿಯರ್​​ಗಳಾದ ಲಾವಣ್ಯ, ಮೀನಾ ಎ.ಟಿ., ನವೀನ್, ಅಮೀನ್ ಎಸ್.ಆನದಿನ್ನಿ ಮತ್ತು ಪ್ರಥಮ ದರ್ಜೆ ಸಹಾಯಕರಾದ ಜಿ.ಹೆಚ್.ಚಿಕ್ಕಪ್ಪೇಗೌಡ ಎಂಬುವರು ಅಮಾನತುಗೊಂಡ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಾಗಿದ್ದಾರೆ.

ಹೈಕೋರ್ಟ್ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡದ ಉಪ ವಿಭಾಗದ ಕಚೇರಿಯಲ್ಲಿ ಕಳೆದ ತಿಂಗಳು ಮಾರ್ಚ್ 10ರಂದು ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಮೀನಾ ಎ.ಟಿ. ಅವರ ಹುಟ್ಟುಹಬ್ಬ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಬೇರೆ ಕಚೇರಿಗಳಲ್ಲಿ ಸಹಾಯಕ ಇಂಜಿನಿಯರ್​​ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್, ಅಮೀನ್ ಎಸ್. ಆನದಿನ್ನಿ ಮತ್ತು ಇತರರು ಪಾಲ್ಗೊಂಡಿದ್ದರು.

ಸರ್ಕಾರಿ ಕಚೇರಿಯಲ್ಲಿ ಅದೂ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡುವ ಹೈಕೋರ್ಟ್ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೇ ಬರ್ತ್​​ಡೇ ಆಚರಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಈ ಬಗ್ಗೆ ತನಿಖೆ ನಡೆಸಿ ವರದಿ ಪಡೆದಿದ್ದರು. ಸರ್ಕಾರಿ ಕಚೇರಿಯಲ್ಲಿ ನಿರ್ದಿಷ್ಟಪಡಿಸಿದ ಗಣ್ಯ ವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮ ನಡೆಸಲು ಮಾತ್ರ ಅವಕಾಶವಿದ್ದು, ಇತರರ ಜಯಂತಿ ಆಚರಣೆಗೆ ಅವಕಾಶ ಇರುವುದಿಲ್ಲ ಆದೇಶದಲ್ಲಿ ತಿಳಿಸಲಾಗಿದೆ.

ಹುಟ್ಟುಹಬ್ಬ ಆಚರಣೆ ವೇಳೆ ಹೈಕೋರ್ಟ್​​ನಲ್ಲಿ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ಸ್ವಿಚ್ ಆಫ್ ಮಾಡಿರುವುದು ಸಹ ಗಂಭೀರ ಸ್ವರೂಪದ ಕರ್ತವ್ಯಲೋಪವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆಯದೇ ಸಿಸಿ ಕ್ಯಾಮರಾ ಬಂದ್ ಮಾಡಿದ್ದು ಮತ್ತು ನಿಯಮಬಾಹಿರವಾಗಿ ಬರ್ತ್​​​ಡೇ ಆಚರಿಸಿರುವುದು ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು-2021ರ ನಿಯಮ 3(1)(1ರಿಂದ4) ಉಲ್ಲಂಘನೆಯಾಗಿದೆ ಎಂದು ತಿಳಿಸಿ ಈ ಎಲ್ಲ ಇಂಜಿನಿಯರ್​ಗಳು ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಸರ್ಕಾರದ ಆದೇಶದಂತೆ ಶಿವಮೊಗ್ಗದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕೇಂದ್ರ) ಅವರು ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬದ ಆಚರಣೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಿದ್ದರು. ಬರ್ತ್ ಡೇ ಸಂದರ್ಭದಲ್ಲಿ ಹೈಕೋರ್ಟ್​​ನ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಸ್ವಿಚ್ ಆಫ್ ಮಾಡಿದ್ದನ್ನು ಗಂಭೀರ ಸ್ವರೂಪದ ಕರ್ತವ್ಯಲೋಪವೆಂದು ಪರಿಗಣಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments