ಇಂಧನ ಸಂರಕ್ಷಣೆ ಮತ್ತು ಪಂಚಾಮೃತ ಗುರಿಗಳನ್ನು ಸಾಧಿಸಲು ‘ನೆಟ್ ಜೀರೋ’ ಕಟ್ಟಡಗಳು ಅನಿರ್ವಾಯ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದ್ದಾರೆ.
ನಾಗರಬಾವಿಯ ಕ್ರೆಡಲ್ ಕಚೇರಿಯಲ್ಲಿ ಆಯೋಜಿಸಿದ್ದ ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ ಕುರಿತ ಎರಡು ದಿನಗಳ (ಏ.3-4) ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಇಸಿಬಿಸಿ ನಿಯಮಗಳ ಜಾರಿಗೆ ರಾಜ್ಯದ ಬದ್ಧತೆಯನ್ನು ವಿವರಿಸಿದರು.
“ಬಿಇಇಯ ಇಂಧನ ಸಂರಕ್ಷಣಾ ಕಟ್ಟಡ ಸಂಹಿತೆ 100 ಕಿ.ವ್ಯಾ ಅಥವಾ ಹೆಚ್ಚಿನ ಸಂಪರ್ಕಿತ ಲೋಡ್ ಹೊಂದಿರುವ ಹೊಸ ವಾಣಿಜ್ಯ ಕಟ್ಟಡಗಳಿಗೆ ಇಂಧನ ದಕ್ಷತೆಯ ನಿರ್ದಿಷ್ಟ ನಿಯಮಗಳನ್ನು ನಿಗದಿಪಡಿಸಿದೆ. ಪರಿಸರ ಸ್ನೇಹಿ ‘ನೆಟ್ ಜೀರೋ’ ಕಟ್ಟಡಗಳ ನಿರ್ಮಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ್ದಾಗಿದ್ದು, ಈ ನಿಯಮಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಇಂಧನದ ಬಳಕೆ ತಗ್ಗವುದು,” ಎಂದರು.
“ಇಂಧನ ಉಳಿತಾಯದ ಗುರಿ ಸಾಧಿಸುವ ನಿಟ್ಟಿನಲ್ಲಿ ಶೇ.100ರಷ್ಟು ನವೀಕರಿಸಬಹುದಾದದ ಇಂಧನ ಬಳಕೆ ಮಾಡುವ ‘ನೆಟ್ ಜೀರೋ’ ಕಟ್ಟಡಗಳು ಅತ್ಯಂತ ನಿರ್ಣಾಯಕವಾಗಿದೆ. ಈ ಕಾರ್ಯಾಗಾರವು ಕರ್ನಾಟಕದಲ್ಲಿ ಇಂಧನ-ಸಮರ್ಥ ಕಟ್ಟಡ ನಿರ್ಮಾಣ ಹಾಗೂ ಅದಕ್ಕೆ ಪೂರಕವಾದ ಅನುಸರಣೆಯನ್ನು ಉತ್ತೇಜಿಸುವುದಲ್ಲದೇ, ರಾಜ್ಯ ಅನುಮೋದನಾ ಪ್ರಾಧಿಕಾರಗಳಾದ ಅಧಿಕಾರಿಗಳಿಗೆ ಅಗತ್ಯ ಪರಿಣಿತಿ ನೀಡುತ್ತದೆ,”ಎಂದರು.
“ದೇಶದಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್ತಿನಲ್ಲಿ ಮೂರನೇ ಒಂದರಷ್ಟು ಭಾಗ ಕಟ್ಟಡಗಳಿಗೆ ಬಳಕೆಯಾಗುತ್ತಿದ್ದು, ಹಸಿರುಮನೆ ಅನಿಲ ಹೊರಸೂಸುವಿಕೆಯ ಅತಿದೊಡ್ಡ ಕಾರಣಗಳಲ್ಲಿ ಇದು ಒಂದಾಗಿದೆ. 2030ರ ವೇಳೆಗೆ ಅಗತ್ಯವಾಗಲಿರುವ ಕಟ್ಟಡಗಳಲ್ಲಿ ಶೇ.70ರಷ್ಟು ಇನ್ನೂ ನಿರ್ಮಾಣವಾಗಬೇಕಿರುವುದರಿಂದ ನೆಟ್ ಜೀರೋ ಕಟ್ಟಡಗಳಿಗೆ ಆದ್ಯತೆ ನೀಡುವುದು ಮುಖ್ಯವಾಗಿದೆ,” ಎಂದು ತಿಳಿಸಿದರು.
ರಾಜ್ಯದಲ್ಲಿ ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಗತ್ಯ ತಿಳಿವಳಿಕೆ ಹಾಗೂ ಇಸಿಬಿಸಿ ಅನುಸರಣಾ ಕಾರ್ಯವಿಧಾನಗಳು, ತಾಂತ್ರಿಕ ಮಾಹಿತಿ ಹಾಗೂ ಸೌರ, ಪವನ ಮುಂತಾದ ನವೀಕರಿಸಬಹುದಾದ ಇಂಧನದ ಏಕೀಕೃತ ಬಳಕೆಗೆ ಪೂರಕ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.
ರಾಜ್ಯಾದ್ಯಂತ ಸುಸ್ಥಿರ ನಿರ್ಮಾಣ ಅಭ್ಯಾಸಗಳನ್ನು ಉತ್ತೇಜಿಸುವ ಈ ಕಾರ್ಯಾಗರದಲ್ಲಿ ಇಸಿಬಿಸಿ ಮಾಸ್ಟರ್ ತರಬೇತುದಾರರಾದ ಕನಕರಾಜ್ ಗಣೇಶನ್ ಮತ್ತು ಕುಲದೀಪ್ ಕುಮಾರ್ ಸಾದೇವಿ ಅವರು ವಾಣಿಜ್ಯ ಕಟ್ಟಡಗಳಲ್ಲಿ ಇಂಧನ ದಕ್ಷತೆಯ ಮಾನದಂಡಗಳ ಅನುಸರಣೆಯ ಕುರಿತು ವಿವರಿಸಿದರು.
ರಾಜ್ಯ ಅನುಮೋದನಾ ಪ್ರಾಧಿಕಾರಗಳಾದ ನಗರಾಭಿವೃದ್ಧಿ ಇಲಾಖೆ (ಯುಡಿಡಿ), ಜಿಲ್ಲಾ ಮುನ್ಸಿಪಲ್ ಪ್ರಾಧಿಕಾರಗಳ (ಡಿಎಂಎ) ಅಡಿಯಲ್ಲಿ ಕಾರ್ಯನಿರ್ವಹಿಸುವ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್‌ಬಿ), ಬಿಬಿಎಂಪಿಯೂ ಸೇರಿ ಸುಮಾರು 200 ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ
ಸುಸ್ಥಿರ ನಗರ ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಸ್ಮಾರ್ಟ್ ಸಿಟಿ ಮಿಷನ್, ಇಂಧನ-ಸಮರ್ಥ ಕಟ್ಟಡಗಳಿಗೆ ಒತ್ತು ನೀಡುತ್ತದೆ. ಇಂಧನ ದಕ್ಷತೆ ಬ್ಯೂರೋ ಪ್ರಾರಂಭಿಸಿದ ಇಂಧನ ಸಂರಕ್ಷಣೆ ಕಟ್ಟಡ ಸಂಹಿತೆ (ಇಸಿಬಿಸಿ) ವಾಣಿಜ್ಯ ಕಟ್ಟಡಗಳಿಗೆ ಇಂಧನ ಕಾರ್ಯಕ್ಷಮತೆಯ ಮಾನದಂಡಗಳನ್ನು ನಿಗದಿಪಡಿಸುತ್ತದೆ. ರಾಜ್ಯದಲ್ಲಿ ವಾಣಿಜ್ಯ ಕಟ್ಟಡಗಳಿಗೆ ಇಸಿಬಿಸಿ ಪಾಲನೆ ಕಡ್ಡಾಯವಾಗಿದ್ದು, ನಗರಾಭಿವೃದ್ಧಿ ಇಲಾಖೆಯು ಸ್ಥಳೀಯ ಬೈಲಾಗಳು ಮತ್ತು ಅಸ್ತಿತ್ವದಲ್ಲಿರುವ ಆನ್‌ಲೈನ್ ಅನುಮೋದನೆ ವ್ಯವಸ್ಥೆಯ ಮೂಲಕ ಅದನ್ನು ಜಾರಿಗೊಳಿಸುತ್ತದೆ. ಜತೆಗೆ, ಪಿಡಬ್ಲ್ಯೂಡಿ, ಯುಡಿಡಿ ಮತ್ತು ಡಿಸ್ಕಾಂಗಳಂತಹ ಇಲಾಖೆಗಳ ನಡುವಿನ ಸಮನ್ವಯವನ್ನು ಖಚಿತಪಡಿಸುತ್ತದೆ.