ಬೆಲೆ ಏರಿಕೆಗಳಿಂದ ತತ್ತರಿಸುವ ಜನತೆಗೆ ಈಗ ಮತ್ತೆ ನಂದಿನ ಹಾಲಿನ ಬೆಲೆ ಏರಿಕೆ ಬಿಸಿ ತಟ್ಟಿದೆ. ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರೂಪಾಯಿ ಏರಿಕೆ ಮಾಡಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ 4 ರೂ. ದರ ಹೆಚ್ಚಿಸುವ ನಿರ್ಧಾರಕ್ಕೆ ಬರಲಾಗಿದೆ. ರಾಜ್ಯದಲ್ಲಿ ಸದ್ಯ ‘ನಂದಿನಿ’ ಹಾಲು ಲೀಟರ್‌ಗೆ 42 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ ಆದ 46 ರೂ.ಗೆ ಏರಿಕೆ ಕಂಡಿದೆ. ಉಳಿದಂತೆ ‘ತಿರುಮಲ ಹಾಲು’ 52 ರೂ., ಹೆರಿಟೇಜ್ 50 ರೂ., ದೊಡ್ಲ 50 ರೂ., ಜೆರ್ಸಿ 50 ರೂ., ಅರೋಕ್ಯ 50 ರೂ. ಹಾಗೂ ಅಮುಲ್ 54 ರೂ.ಗೆ ಮಾರಾಟವಾಗುತ್ತಿದೆ.
ಹಾಲಿನ ಬೆಲೆಯನ್ನು ಆಗಸ್ಟ್ 2023 ರಲ್ಲಿ 3 ರೂ. ಹೆಚ್ಚಿಸಿದ್ದರಿಂದ ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಹೆಚ್ಚಳವಾಯಿತು. ಜೂನ್ 2024 ರಲ್ಲಿ ಮತ್ತೆ 2 ರೂ. ಹೆಚ್ಚಿಸಿ, ಹೆಚ್ಚುವರಿಯಾಗಿ 50 ಎಂ.ಎಲ್. ಹಾಲು ನೀಡಲಾಯಿತು.
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 5 ರೂ. ದರ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕಾವೇರಿಯಲ್ಲಿ ಇತ್ತೀಚೆಗೆ ಸಭೆ ನಡೆಸಿ, “ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ. ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂಬುವುದು ಸರ್ಕಾರದ ದೃಢ ನಿಲುವು” ಎಂದು ಸಿಎಂ ಹೇಳಿದ್ದರು.


