ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನವಾಗಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾಗೊಂಡಿದೆ.
ಆರ್ಥಿಕ ಅಪರಾಧಗಳ ನ್ಯಾಯಾಲಯವು ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಇಂದು (ಮಾರ್ಚ್ 14) ಆದೇಶ ಹೊರಡಿಸಿದೆ.
ದುಬೈನಿಂದ ಚಿನ್ನ ಕಳ್ಳ ಸಾಗಣೆ ಆರೋಪದ ಮೇಲೆ ನಟಿ ರನ್ಯಾ ರಾವ್ ಬೆಂಗಳೂರು ವಿಮಾನ ನಿಲ್ದಾಣ ಸಿಕ್ಕಿಬಿದ್ದಿದ್ದು, ಡಿಆರ್‌ಐ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸಿದ್ದಾರೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ ಇಂದು ನಟಿ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.
ರನ್ಯಾ ರಾವ್ ಪರವಾಗಿ ಹಿರಿಯ ವಕೀಲ ಕಿರಣ್ ಜವಳಿ ವಾದ ಮಂಡಿಸಿದರೆ, ಡಿಆರ್‌ಐ ಪರವಾಗಿ ಮಧು ರಾವ್ ವಾದ ಮಂಡಿಸಿದ್ದರು. ಆದರೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಈ ಪ್ರಕರಣದಲ್ಲಿ ವಾದ-ಪ್ರತಿವಾದಗಳನ್ನು ಆಲಿಸಿ, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಅದರಂತೆ ಕೋರ್ಟ್ ರನ್ಯಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದು, ರನ್ಯಾ ಜೈಲಿನಲ್ಲೇ ಉಳಿಯಬೇಕಿದೆ. ರನ್ಯಾ ರಾವ್ಗೆ ಜಾಮೀನಿಗಾಗಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.
ಇಡಿಯಿಂದ ತನಿಖೆ ಚುರುಕು
ಇಷ್ಟು ದಿನ ರನ್ಯಾ ರಾವ್ ಕೇಸ್ನಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಡಿಆರ್‌ಐ ಅಧಿಕಾರಿಗಳು ಮಾತ್ರ ವಿಚಾರಣೆ ನಡೆಸುತ್ತಾ ಇದ್ದರು. ಈಗ ಕೇಸ್ನಲ್ಲಿ ಇಡಿಯಿಂದ ಇಸಿಐಆರ್ ದಾಖಲಾಗಿದೆ. ಇಸಿಐಆರ್ ಎಂದರೆ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಷನ್ ರಿಪೋರ್ಟ್. ಅಕ್ರಮ ಹಣ ವರ್ಗಾವಣೆ ವಿಚಾರ ತಿಳಿದಿರುವುದರಿಂದ ಈ ಕೇಸ್ ದಾಖಲಾಗಿದೆ. ಇದರ ಬೆನ್ನಲ್ಲೇ ಇಡಿ ರನ್ಯಾ ರಾವ್ ಹಾಗೂ ಎರಡನೇ ಆರೋಪಿ ತರುಣ್ ಕೊಂಡೂರು ರಾಜು ನಿವಾಸದ ಮೇಲೂ ದಾಳಿ ಮಾಡಿ ಮಹತ್ವದ ದಾಖಲೆ ಕಲೆಹಾಕಿದೆ.