2014ರ ನಂತರ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಹೀಗಾಗಿ ಬೆಂಗಳೂರು ಜಲ ಮಂಡಳಿ (BWSSB)ಯು 7-8 ಪೈಸೆ ದರ ಏರಿಕೆಗೆ ಪ್ರಸ್ತಾಪ ನೀಡಿದ್ದು, ಸದ್ಯಕ್ಕೆ 1 ಪೈಸೆಯಷ್ಟು ಮಾತ್ರ ಏರಿಕೆ ಮಾಡಲು ಚಿಂತನೆ ಮಾಡಲಾಗಿದ್ದು. ಈ ಬಗ್ಗೆ ಸದ್ಯದಲ್ಲೇ ನಗರದ ಶಾಸಕರ ಬಳಿ ಚರ್ಚಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ರಾಮೋಜಿ ಗೌಡರು, ಬೇಸಿಗೆ ಆರಂಭವಾಗುತ್ತಿದ್ದು, ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವದಿಂದ ಖಾಸಗಿ ಟ್ಯಾಂಕರ್ ಗಳು ದುಪ್ಪಟ್ಟು ಹಣದ ಬೇಡಿಕೆ ಇಡುತ್ತಿದ್ದು, ಜನರಿಗೆ ಉಚಿತವಾಗಿ ನೀರು ಪೂರೈಸಬೇಕು ಹಾಗೂ ಕಾವೇರಿ ಸಂಪರ್ಕ ನೀಡಿರುವ ಮನೆಗಳಿಗೆ ಶೀಘ್ರ ನೀರು ಒದಗಿಸಬೇಕು ಎಂದು ಶುಕ್ರವಾರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು, “ಶಿವರಾತ್ರಿ ಕಳೆದಿದ್ದು ಬೇಸಿಗೆ ತೀವ್ರತೆ ಹೆಚ್ಚಾಗಿ ಉಷ್ಣಾಂಶ ಏರಿಕೆಯಾಗಿದೆ. ಆದರೆ ಕಳೆದ ವರ್ಷ ಬಹಳ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. 7 ಸಾವಿರ ಕೊಳವೆಬಾವಿಗಳು ಬತ್ತಿದ್ದವು. ಹೀಗಾಗಿ ಖಾಸಗಿ ಟ್ಯಾಂಕರ್ ಗಳನ್ನು ಪಾಲಿಕೆ ಸುಪರ್ದಿಗೆ ತೆಗೆದುಕೊಳ್ಳಲಾಗಿತ್ತು. ಇದೇ 22ರಂದು ಜಲಸಂರಕ್ಷಣಾ ದಿನವಾಗಿದ್ದು ಒಂದು ತಿಂಗಳ ಕಾಲ ಜಲ ಸಂರಕ್ಷಣೆ ವಿಚಾರವಾಗಿ ಜಾಗೃತಿ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ಕಾವೇರಿ 5ನೇ ಹಂತದ ಯೋಜನೆಯನ್ನು ಪೂರ್ಣಗೊಳಿಸಿ ನೀರನ್ನು ಹೊರ ತರಲಾಗಿದೆ. 110 ಹಳ್ಳಿಗಳಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
“ಗುತ್ತಿಗೆದಾರರು ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳನ್ನು ಕಟ್ಟಿದ್ದು, ಯಾರೊಬ್ಬರೂ ಬಿಡಬ್ಲ್ಯೂಎಸ್ಎಸ್ ಬಿ ಗೆ ನೀರಿನ ಸಂಪರ್ಕದ ಡೆಪಾಸಿಟ್ ಪಾವತಿ ಮಾಡಿಲ್ಲ. ಅನುಮತಿ ಪಡೆಯದೇ ಅಕ್ರಮವಾಗಿ ಸಂಪರ್ಕ ಪಡೆದಿದ್ದಾರೆ. ಅವರಿಗೆ ನೋಟೀಸ್ ನೀಡಲಾಗಿದೆ. 2014ರಿಂದ ಇಲ್ಲಿಯವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ ನಾವು ಕನಿಷ್ಠ ಪಕ್ಷ ಒಂದು ಪೈಸೆಯಾದರೂ ನೀರಿನ ದರ ಏರಿಕೆ ಮಾಡಲು ತೀರ್ಮಾನಿಸಿದ್ದೇವೆ. ಇದರಿಂದ ಮಂಡಳಿ ಪ್ರತಿ ವರ್ಷ ಅನುಭವಿಸುತ್ತಿರುವ ಸುಮಾರು 1 ಸಾವಿರ ಕೋಟಿ ನಷ್ಟವನ್ನು ತಪ್ಪಿಸಬಹುದಾಗಿದೆ. ಮಂಡಳಿಯ ವಿದ್ಯುತ್ ಬಿಲ್ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಮಂಡಳಿಯವರು 7-8 ಪೈಸೆ ಏರಿಕೆಗೆ ಮುಂದಾಗಿದ್ದರು. ನಾನು ಸಧ್ಯಕ್ಕೆ 1 ಪೈಸೆಯಷ್ಟು ಮಾಡಿ ಸಾಕು ಎಂದು ಹೇಳಿದ್ದೇನೆ. ಪಾಲಿಕೆ ಬಜೆಟ್ ಕುರಿತ ಸಭೆ ವೇಳೆ ಬೆಂಗಳೂರಿನ ಶಾಸಕರನ್ನು ಕರೆದು ಸಭೆ ಮಾಡಿ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.
ದೆಹಲಿಗೆ ಸರ್ವಪಕ್ಷದ ನಿಯೋಗ ಹೋಗಿ ಮನವಿ ಮಾಡೋಣ
ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರು, ಆಲಮಟ್ಟಿ ಸಂತ್ರಸ್ತರಿಗೆ ಒಂದೇ ಬಾರಿಗೆ ಪರಿಹಾರ ನೀಡುವ ಹಾಗೂ ಮಹಾರಾಷ್ಟ್ರ ತಗಾದೆ ಎತ್ತಿರುವ ವಿಚಾರದ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು, “ಮಾನ್ಯ ಸದಸ್ಯರು ಪ್ರಶ್ನೆಯನ್ನು ಹಾಕುವುದರ ಜತೆಗೆ ಉತ್ತರವನ್ನು ಅವರೇ ಕೊಟ್ಟಿದ್ದಾರೆ. ಅವರಿಗೆ ಸಮಸ್ಯೆ ಏನಿದೆ ಎಂದು ಗೊತ್ತಾಗಿದೆ. ಅವರು ಉತ್ತಮ ಸಂಶೋಧನೆ ನೀಡಿದ್ದಾರೆ. ಈ ವಿಚಾರವಾಗಿ ನಾನು ಹೇಳುವುದೆಂದರೆ ಎಲ್ಲಾ ಪಕ್ಷದವರು ಸೇರಿ ನಿಯೋಗದ ಮೂಲಕ ದೆಹಲಿಗೆ ಭೇಟಿ ಮಾಡಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡೋಣ. ಇದು ತಾಂತ್ರಿಕ ವಿಷಯವಾಗಿದ್ದು ಈ ವಿಚಾರವಾಗಿ ಸೋಮವಾರ ವಿಸ್ತೃತವಾದ ಉತ್ತರ ನೀಡಲಾಗುವುದು” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಫಿಯವಾಗಿದೆ
ನಾಗರಾಜ್ ಯಾದವ್ ಅವರು ಕಸ ವಿಲೇವಾರಿಗೆ ತಡೆಯಾಗಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದೊಂದು ಮಾಫಿಯವಾಗಿದೆ. ಹಿಂದೆ 89 ಗುಂಪು ಮಾಡಿ ಟೆಂಡರ್ ಕರೆದಿದ್ದರು. ಈಗ ಅವರು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿ ನಮಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ. ನ್ಯಾಯಾಲಯ ಕೂಡ ಈ ವಿಚಾರವಾಗಿ ನಾವು ಏನು ಮಾಡಬೇಕು ಎಂಬ ತೀರ್ಪು ನೀಡುತ್ತಿಲ್ಲ. ನಾವು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರವಲಯದಲ್ಲಿ ಕಸ ವಿಲೇವಾರಿಗೆ ಪ್ರಯತ್ನ ಮಾಡುತ್ತಿದ್ದೇವೆ. ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ” ಎಂದರು.
ಸದಸ್ಯರಾದ ಟಿ.ಎನ್ ಜವರಾಯಿ ಗೌಡ ಅವರು ಬೆಂಗಳೂರಿನಲ್ಲಿ ಸ್ವಚ್ಛತಾಕರ್ಮಿಗಳ ಸಂಖ್ಯೆ ಕಡಿಮೆಯಾಗಿದ್ದು, ಪೌರಕಾರ್ಮಿಕರ ನೇಮಕಾತಿ ಅವ್ಯವಹಾರ ಬಗ್ಗೆ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ವಿಚಾರವಾಗಿ ನಾನು ವಿವರವಾದ ಮಾಹಿತಿ ಪಡೆಯುತ್ತೇನೆ. ಒಟ್ಟು 5 ಸಾವಿರ ಹುದ್ದೆಯನ್ನು ವಿಶೇಷ ಅಭಿಯಾನದ ಮೂಲಕ 2 ವರ್ಷ ದಿನಗೂಲಿ ಕೆಲಸ ಮಾಡಬೇಕು ಎಂದು ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡಬಾರದವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇಲ್ಲಿ ಈ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಈ ವಿಚಾರವಾಗಿ ನೀವು ನನ್ನ ಗಮನ ಸೆಳೆದಿದ್ದು ಸೋಮವಾರ ಅಥವಾ ಮಂಗಳವಾರ ಇನ್ನಷ್ಟು ವಿವರವಾದ ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.