ಕೊಪ್ಪಳದ ಸಣಾಪುರ ರೆಸಾರ್ಟ್ ಮಾಲಕಿ ಹಾಗೂ ಇಸ್ರೇಲ್ ಮಹಿಳೆ ಮೇಲೆ ಗ್ಯಾಂಗ್ರೇಪ್ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ವಿವಿದ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್/ ಹೋಮ್ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ಕುರಿತು ಸುತ್ತೋಲೆ ಹೊರಡಿಸಿದೆ.
ರಾಜ್ಯದ ಪ್ರವಾಸಿ ತಾಣಗಳಲ್ಲಿನ ಹೋಮ್ಸ್ಟೇಗಳು ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಹಾಗೂ ಸುರಕ್ಷತೆಗಾಗಿ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಪೊಲೀಸರಿಂದ/ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿಯನ್ನು ಪಡೆಯದೇ ನಿರ್ಜನ ಪ್ರದೇಶ/ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಮ್ಸ್ಟೇ ಮಾಲೀಕರೆ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದು ಸರ್ಕಾರ ಹೇಳಿದೆ.