ಎಂಟು ಭ್ರಷ್ಟ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ರಾಜ್ಯದ 7 ಜಿಲ್ಲೆಗಳಲ್ಲಿ 30 ಕ್ಕೂ ಹೆಚ್ಚು ಕಡೆ ಇಂದು ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಬೆಂಗಳೂರು, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಕಾರ್ಯಾಚರಣೆ ನಡೆದಿದೆ.
ದೂರು ಬಂದ ನಂತರ ಪರಿಶೀಲಿಸಿ ಮಾಹಿತಿ ಕಲೆಹಾಕಿ 8 ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ರಾಜಾಜಿನಗರ ಬೆಸ್ಕಾಂನ ಇಂಜಿನಿಯರ್ ನಾಗರಾಜ್ ಅವರ ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ. ಇವರು ಮೂಲ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಮಲೇ ಮಹದೇಶ್ವರ ಬೆಟ್ಟದವರು. ಕೊಳ್ಳೇಗಾಲ ಬಳಿ 6 ಎಕರೆ ಜಮೀನು, ಬೆಂಗಳೂರಿನಲ್ಲಿ ಒಂದು ಮನೆ, ಎರಡು ನಿವೇಶನಗಳು, ಕೋಲಾರ ತಾಲ್ಲೂಕು ನರಸಾಪುರ ಬಳಿ ಭೂಮಿ ಹೊಂದಿರುವುದು ಗೊತ್ತಾಗಿದೆ.
ಬೆಂಗಳೂರಿನ ಬಿಬಿಎಂಪಿಯ ವಲಯ ಮುಖ್ಯ ಇಂಜಿನಿಯರ್ ಟಿ.ಡಿ.ನಂಜುಂಡಪ್ಪ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಎಚ್ಚೆತ್ತು ಗಲಿಬಿಲಿಗೊಂಡಿದ್ದಾರೆ. ಕೆಲವು ಬಿಬಿಎಂಪಿ ದಾಖಲೆಗಳು ಮನೆಯಲ್ಲಿ ಸಿಕ್ಕಿದ್ದು ಇದರ ಬಗ್ಗೆ ಪ್ರಶ್ನಿಸಲಾಗುತ್ತಿದೆ. ಚಿನ್ನಾಭರಣ, ನಗದು ವಿವಿಧೆಡೆ ವಾಣಿಜ್ಯ ಸಂಕೀರ್ಣ ಸೇರಿ ಕೃಷಿ ಜಮೀನು ಕೂಡ ಪತ್ತೆಯಾಗಿದೆ.ಬಿಬಿಎಂಪಿ ಆವರಣದಲ್ಲಿರುವ ಅವರ ಕಚೇರಿ ಬಳಿ ಪೊಲೀಸರನ್ನು ನೋಡಿ ಬೆಳ್ಳಂಬೆಳಿಗೆ ಬಂದಿದ್ದ ನೌಕರರು ಶಾಕ್ ಆಗಿದ್ದಾರೆ.
ಇದೇ ವೇಳೆ ಬಿಬಿಎಂಪಿಯ ಗುಣಮಟ್ಟ ನಿಯಂತ್ರಣ ಮತ್ತು ಗುಣಮಟ್ಟ ಭರವಸೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್.ಬಿ.ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆದಿದ್ದು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
ತುಮಕೂರಿನಲ್ಲಿ ವೈದ್ಯ ಡಾ.ಜಗದೀಶ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೆಕೆರೆಯಲ್ಲಿರುವ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯನಾಗಿರುವ ಜಗದೀಶ್ ಅವರು ತುಮಕೂರಿನ ಮಂಜುನಾಥ್ ನಗರದಲ್ಲಿ ಹೊಂದಿರುವ ಜಗದೀಶ್ ಕಾಂಪ್ಲೆಕ್ಸ್, ಶಿರಾ ತಾಲ್ಲೂಕಿನ ಯನಹಳ್ಳಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಜಗದೀಶ್ ಪತ್ನಿ ರೂಪಾ, ಸೋದರ ಕಾಂತರಾಜ್ ಮನೆ ಮೇಲೂ ದಾಳಿ ಮಾಡಲಾಗಿದೆ.
ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಲೆಕ್ಕಾಧಿಕಾರಿ ಮಲ್ಲೇಶ್ ದುರ್ಗದ್ ಅವರ ಬಾಗಲಕೋಟೆ ಕಚೇರಿ, ಬಾಗಲಕೋಟೆ ಹಳೆ ವೀರಾಪುರ ರಸ್ತೆಯಲ್ಲಿರುವ ಮನೆ .ಬೀಳಗಿ ತಾಲೂಕಿನ ತಳ್ಳಿಕೇರಿಯಲಿ ಮನೆಯಲ್ಲಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಯುತ್ತಿದೆ.
ಕಲಬುರಗಿಯಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಘಟಕದ ಅಧಿಕಾರಿ ಜಗನ್ನಾಥ್ ಅವರ ಓಕಳಿ ಕ್ಯಾಂಪ್ ಬಡಾವಣೆಯಲ್ಲಿರುವ ಮನೆ, ಬೆಂಗಳೂರಿನ ಕಚೇರಿ, ಧನ್ನೂರ್ (ಕೆ) ಗ್ರಾಮದಲ್ಲಿರುವ ಮನೆ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಈ ತಿಂಗಳ ಅಂತ್ಯದಲ್ಲಿ ನಿವೃತ್ತರಾಗುತ್ತಿದ್ದ ಜಗನ್ನಾಥ್ ಲೋಕಾಯುಕ್ತ ದೊಡ್ಡ ಶಾಕ್ ನೀಡಿದೆ.
ಇವರ ನಿವಾಸದಲ್ಲಿ ಸುಮಾರು 2 ಕೆ.ಜಿ ಚಿನ್ನಾಭರಣ ಸೇರಿ ಬೆಳ್ಳಿ ,ಐಷಾರಾಮಿ ವಾಚ್ ಸೇರಿ ಹಲವು ಬೆಲೆಬಾಳುವ ವಸ್ತುಗಳು ಪತ್ತೆಯಾಗಿದೆ.ಈ ವೇಳೆ ಲಾಕರ್ ಕೀ ಸಿಗದ ಕಾರಣ ಅದನ್ನು ಒಡೆದು ಪರಿಶೀಲಿಸಿದಾಗ ಹಲವಾರು ದಾಖಲೆಗಳು ಭಾರಿ ನಗದು ಪತ್ತೆಯಾಗಿದೆ. ಆಳಂದದಲ್ಲಿ 30 ಎಕರೆ ಜಮೀನು, ಬೀದರ್, ಬಸವ ಕಲ್ಯಾಣದಲ್ಲಿ ಆಸ್ತಿ ಹೊಂದಿರುವುದು ಗೊತ್ತಾಗಿದೆ.