Homeಕರ್ನಾಟಕಮಹಿಳಾ ಸ್ನೇಹಿ ಗ್ರಾ.ಪಂ ಅಭಿಯಾನಕ್ಕೆ ಮಾ.8ರಂದು ಚಾಲನೆ: ಪ್ರಿಯಾಂಕ್‌ ಖರ್ಗೆ

ಮಹಿಳಾ ಸ್ನೇಹಿ ಗ್ರಾ.ಪಂ ಅಭಿಯಾನಕ್ಕೆ ಮಾ.8ರಂದು ಚಾಲನೆ: ಪ್ರಿಯಾಂಕ್‌ ಖರ್ಗೆ

ಮಹಿಳಾ ಸಶಕ್ತೀಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಗಾಗಿ ಅಂತರರಾಷ್ಟ್ರೀಯ ಮಹಿಳಾ ದಿನವಾದ 2025ರ ಮಾರ್ಚ್ 08ರಿಂದ 2025ರ ಜೂನ್‌ 30ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಮತ್ತು ಮಹಿಳಾ ಗ್ರಾಮ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಗ್ರಾಮಗಳ ಅರ್ಧದಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಮಹಿಳೆಯರು ವಾರ್ಡ್‌ ಮತ್ತು ಗ್ರಾಮ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಮಂಡಿಸುವುದು ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 3-ಹೆಚ್‌ ಅನ್ವಯ ಮಹಿಳೆಯರಿಗಾಗಿ ಗ್ರಾಮ ಸಭೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಗ್ರಾಮ ಪಂಚಾಯತಿಗಳಲ್ಲಿ ಸ್ಥಳೀಯ ಮಹಿಳಾ ಸ್ವಸಹಾಯ ಹಾಗೂ ಸ್ತ್ರೀಶಕ್ತಿ ಸಂಘಗಳ ಸಹಭಾಗಿತ್ವದಲ್ಲಿ ಪೂರ್ವ ಸಿದ್ಧತೆಯೊಂದಿಗೆ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ, ಚಟುವಟಿಕೆಗಳನ್ನು ಆಯೋಜಿಸಿ, ಅರ್ಥಪೂರ್ಣವಾಗಿ ಮಹಿಳಾ ಗ್ರಾಮ ಸಭೆಗಳನ್ನು ನಡೆಸಬೇಕೆಂದು ಸಚಿವರು ಹೇಳಿದ್ದಾರಲ್ಲದೆ, ಮಹಿಳೆಯರಿಂದ ಬರುವ ಬೇಡಿಕೆ, ಸಮಸ್ಯೆ ಹಾಗೂ ಪ್ರಶ್ನೆಗಳಿಗೆ ಸಂಬಂಧಿಸಿದ ಇಲಾಖೆಗಳು ಸ್ಪಂದಿಸುವ ಮೂಲಕ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ತಿಳಿಸಿದ್ದಾರೆ.

ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ನಡೆಸುವ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಉಪ ಸಮಿತಿಗಳ ಸಭೆಗಳನ್ನು ನಡೆಸಲು ಸೂಚಿಸಲಾಗಿದೆ, ಪ್ರತಿ ಗ್ರಾಮದ ಮಹಿಳೆಯರ ಅಂಕಿ-ಸಂಖ್ಯೆಯ ವಿವರಗಳನ್ನು ಸಂಗ್ರಹಿಸಿ ಮಹಿಳಾ ಗ್ರಾಮಸಭೆಯಲ್ಲಿ ಮಂಡಿಸಬೇಕು ಗ್ರಾಮಗಳಲ್ಲಿನ ಎಲ್ಲಾ ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಸ್ವ-ಸಹಾಯ ಸಂಘಗಳ ಎಲ್ಲಾ ಸದಸ್ಯರು ಮಹಿಳಾ ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಖಾತರಿ ಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದ್ದಾರೆ.

ಮಹಿಳಾಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನದ 16 ವಾರಗಳ ಅವಧಿಯಲ್ಲಿ ವಾರಕ್ಕೊಂದರಂತೆ ಸಾಂಸ್ಕೃತಿಕ, ಮನರಂಜನೆ, ಕ್ರೀಡೆ, ಆರೋಗ್ಯ, ಪೌಷ್ಟಿಕಾಂಶ, ನೈರ್ಮಲ್ಯ, ಮಹಿಳಾ ಕಾನೂನುಗಳು ಮುಂತಾದ ವಿಷಯಗಳನ್ನು ಕಾರ್ಯಕ್ರಮಗಳನ್ನು ಆಯೋಜಿಸಲು ಸಚಿವರು ಸೂಚಿಸಿದ್ದಾರೆ. ಗ್ರಾಮಸಭೆ ನಡೆಸುವ ಸಮಯದಲ್ಲಿ ಆರೋಗ್ಯ ಶಿಬಿರ, ವಸ್ತು ಪ್ರದರ್ಶನ, ಸಸಿ ನೆಡುವ ಕಾರ್ಯಕ್ರಮ ಏರ್ಪಾಡು ಮಾಡಲು ಸಚಿವರು ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments