Homeಕರ್ನಾಟಕವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿ ಮರು ವಶಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮಾನುಸಾರ ಮರು ವಶಕ್ಕೆ ಪಡೆಯುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಾಯುಪಡೆಗೆ 1987ರಲ್ಲಿ ಮಂಜೂರು ಮಾಡಲಾಗಿದ್ದ 570 ಎಕರೆ ಭೂಮಿಯ ಪೈಕಿ ಅರಣ್ಯ ಎಂದು ಅಧಿಸೂಚನೆ ಆಗಿರುವ 452 ಎಕರೆ ಮಂಜೂರಾತಿ ರದ್ದುಪಡಿಸಿ, 2017ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಭಾರತೀಯ ವಾಯು ಪಡೆ ಮಾ.1ರಂದು ಎಫ್.ಸಿ. (ಅರಣ್ಯ ತೀರುವಳಿ) ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿತ್ತು. ಇದನ್ನು ತಡೆಯಲಾಗಿದೆ ಎಂದು ಅರಣ್ಯಾಧಿಕಾರಿಗಳು ಇಂದು ತಿಳಿಸಿದ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಈ ಸೂಚನೆ ನೀಡಿದ್ದಾರೆ.

ಸರ್ಕಾರದ 2017ರ ಆದೇಶದನ್ವಯ ಮ್ಯುಟೇಷನ್ ಆಗಿದ್ದು, ಪ್ರಸ್ತುತ ಈ ಜಮೀನಿನ ಪಹಣಿಯಲ್ಲಿ ಮೀಸಲು ಅರಣ್ಯ ಎಂದು ನಮೂದಾಗಿದೆ. ಅರಣ್ಯ ಇಲಾಖೆ ಈ ವಿಷಯವನ್ನು ವಾಯುಪಡೆಯ ಅಧಿಕಾರಿಗಳ ಗಮನಕ್ಕೆ ತಂದು ಸದರಿ ಜಮೀನು, ಮೀಸಲು ಅರಣ್ಯ ಎಂಬ ಫಲಕವನ್ನೂ ಹಾಕಿದೆ. ಈ ಅರಣ್ಯ ಭೂಮಿ ತೆರವು ಮಾಡುವಂತೆ ರಕ್ಷಣಾ ಸಚಿವಾಲಯಕ್ಕೆ ಪತ್ರವನ್ನೂ ಬರೆಯಲಾಗಿದೆ. ಸಂಪೂರ್ಣ ಮಾಹಿತಿ ಇದ್ದರೂ ವಾಯುಪಡೆ ಅನಧಿಕೃತವಾಗಿ, ನಿಯಮ ಮೀರಿ ನಿರ್ಮಾಣ ಕಾಮಗಾರಿ ನಡೆಸುತ್ತಿತ್ತು, ಪ್ರಸ್ತುತ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಸ್ತುತ 444 ಎಕರೆ ಜಮೀನಿನ ಪೈಕಿ ಸುಮಾರು 15 ಎಕರೆ ಪ್ರದೇಶದಲ್ಲಿ ವಾಯುಪಡೆ ಶೂಟಿಂಗ್ ರೇಂಜ್ ನಿರ್ಮಿಸಿಕೊಂಡು ತರಬೇತಿ ನೀಡುತ್ತಿದೆ. ಸ್ವಲ್ಪ ಜಮೀನಿನಲ್ಲಿ ವಾಯುಪಡೆಯ ಕಚೇರಿ ಇತ್ಯಾದಿ ನಿರ್ಮಿಸಿದೆ. ಉಳಿದ ಭೂಮಿ ಅರಣ್ಯ ಸ್ವರೂಪದಲ್ಲೇ ಇದ್ದು, ಮರ, ಗಿಡಗಳಿಂದ ಸಮೃದ್ಧವಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕೂಡಲೇ ಅರಣ್ಯ ಸ್ವರೂಪದ ಜಮೀನನ್ನು ವಶಕ್ಕೆ ಪಡೆಯಲು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮತ್ತು ವಾಯುಪಡೆ ಬಳಕೆ ಮಾಡುತ್ತಿರುವ ಜಮೀನಿಗೆ ಸಂಬಂಧಿಸಿದಂತೆ ಪರ್ವೇಶ್ ಪೋರ್ಟಲ್ ನಲ್ಲಿ ನಿಯಮಾನುಸಾರ ಅರ್ಜಿ ಹಾಕಿ ಎಫ್.ಸಿ. ಪಡೆಯಲು ವಾಯುಪಡೆಗೆ ಪತ್ರ ಬರೆಯಲು ಈಶ್ವರ ಖಂಡ್ರೆ ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments