Homeಕರ್ನಾಟಕಆದ್ಯತೆ ಮೇರೆಗೆ ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ: ಡಿಸಿಎಂ ಡಿ.ಕೆ.ಶಿವಕುಮಾರ್

ಆದ್ಯತೆ ಮೇರೆಗೆ ಗುತ್ತಿಗೆದಾರರ ಬಾಕಿ ಬಿಲ್‌ಗಳ ಪಾವತಿ: ಡಿಸಿಎಂ ಡಿ.ಕೆ.ಶಿವಕುಮಾರ್

ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿ ಮಾಡಲಾಗುವುದು. ಸಣ್ಣ, ಸಣ್ಣ ಬಿಲ್‌ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಮಂಗಳವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, “ಬಿಜೆಪಿ ಕಾಲದಲ್ಲಿ ಅವರು ನನ್ನ ಇಲಾಖೆಯೊಂದರಲ್ಲಿಯೇ 1.20 ಲಕ್ಷ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಆದೇಶ ನೀಡಿ ಹೋಗಿದ್ದು ಕೆಲಸ ನಡೆಯುತ್ತಿದೆ. ಪ್ರಸ್ತುತ 6 ಸಾವಿರ ಕೋಟಿ ರೂ. ಅಷ್ಟು ಮಾತ್ರ ಬಿಲ್ ನೀಡಲು ಅವಕಾಶವಿದೆ. ಕೇಂದ್ರದಿಂದ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಗುತ್ತಿಗೆದಾರರು ಅವರ ನೋವನ್ನು ಹೇಳಿಕೊಂಡಿದ್ದಾರೆ” ಎಂದರು.

ಖರ್ಗೆ ಅವರನ್ನು ಭೇಟಿ ಮಾಡದೆ ಬಿಜೆಪಿ ಕಚೇರಿಗೆ ಹೋಗಲೇ?

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಚಾರ ಕೇಳಿದಾಗ, “ನಾನು ಖರ್ಗೆ ಅವರನ್ನು ಭೇಟಿ ಮಾಡದೇ ಬಿಜೆಪಿ ಕಚೇರಿಗೆ ಭೇಟಿ ನೀಡಲೇ?. ಅವರು ರಾಷ್ಟ್ರದ ಅಧ್ಯಕ್ಷರು, ನಾನು ರಾಜ್ಯದ ಅಧ್ಯಕ್ಷ. ಅವರು ನಮ್ಮ ರಾಜ್ಯಕ್ಕೆ ಬಂದಾಗ ಹೋಗಿ ಭೇಟಿ ಮಾಡಿ ಗೌರವ ನೀಡುವುದು ನಮ್ಮ ಕೆಲಸ. ಪಕ್ಷದ ವಿಚಾರಗಳು, ನೂತನ ಕಾಂಗ್ರೆಸ್ ಕಚೇರಿಗೆ ಗುದ್ದಲಿ ಪೂಜೆ ಮಾಡುತ್ತಿದ್ದು, ಈ ತಿಂಗಳಿನಲ್ಲಿಯೇ ದಿನಾಂಕ ನೀಡಿ ಎಂದು ಮನವಿ ಮಾಡಲು ಹೋಗಿದ್ದೆ” ಎಂದು ಹೇಳಿದರು.

ಸಂದರ್ಭ ಬೇರೆ ರೀತಿಯಿದ್ದು, ಯಾವುದೇ ಭೇಟಿಗೂ ನಾನಾ ಅರ್ಥಗಳು ಉಂಟಾಗುತ್ತವೆ ಎಂದು ಕೇಳಿದಾಗ, “ಯಾವ ರೀತಿ ಬೇಕಾದರೂ ಅರ್ಥ ಮಾಡಿಕೊಳ್ಳಲಿ, ಸಾವಿರ ಚರ್ಚೆ ಮಾಡಲಿ” ಎಂದರು.

ಟೀಕೆ ಮಾಡಲಿ ಎಂದೇ ಹೇಳಿಕೆ ನೀಡಿದ್ದೇನೆ

ನಟ್ಟು- ಬೋಲ್ಟ್ ವಿಚಾರವಾಗಿ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಕೇಳಿದಾಗ, “ಟೀಕೆ ಮಾಡಲಿ ಎಂದು ನಾನು ಹೇಳಿಕೆ ನೀಡಿದ್ದು. ನಾನು ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದು ನನಗೆ ಗೊತ್ತಿದೆ. ಸಹಾಯ ತೆಗೆದುಕೊಂಡವರಿಗೆ ಗೊತ್ತಿದೆ. ನಾನು ಅವರಿಗೆ ರಾಜ್ಯದ ಹಿತಕ್ಕಾಗಿ ಹೇಳಿದ್ದೇನೆ. ನೆಲ, ಜಲ, ಭಾಷೆ ಉಳಿಯಬೇಕು. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವ ಯಾರಿಗಾಗಿ ಮಾಡಿರುವುದು. ಚಿತ್ರರಂಗ ಬೆಳೆಯಲಿ ಎಂದು. ಅವರ ಕ್ಷೇತ್ರದ ಬಗ್ಗೆ ಅವರೇ ಪ್ರಚಾರ ಮಾಡಿಕೊಳ್ಳದೇ ಇದ್ದರೆ ನಾವು ಬೆಳಗ್ಗೆ ಸಂಜೆ ಪ್ರಚಾರ ಮಾಡಿಕೊಳ್ಳಲು ಆಗುತ್ತದೆಯೇ?” ಎಂದು ತಿರುಗೇಟು ನೀಡಿದರು.

ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ

ಚಿತ್ರರಂಗದವರಿಗೆ ಆಹ್ವಾನವನ್ನೇ ಮಾಡಿಲ್ಲ ಎನ್ನುವ ನಾಗಭರಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಆಹ್ವಾನ ಮಾಡದೇ ಇರಬಹುದು. ಈ ಬಗ್ಗೆ ನಮ್ಮ ಇಲಾಖೆಯ ತಪ್ಪಿದೆಯೋ ಯಾರ ತಪ್ಪಿದೆ ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಟೀಕೆ ಮಾಡುತ್ತಾರೆ ಎಂದು. ಆದರೆ ಎಚ್ಚರಿಕೆ ಕೊಡಬೇಕಲ್ಲವೇ? ಟೀಕೆ ಮಾಡುವುದರಿಂದ ನನಗೆ ಬೇಸರವಿಲ್ಲ. ನಾವು ತಪ್ಪು ಮಾಡಿದ್ದರೇ ಸರಿ ಮಾಡಿಕೊಳ್ಳೋಣ, ಅವರು ತಪ್ಪು ಮಾಡಿದ್ದರೆ ಅವರು ಸರಿ ಮಾಡಿಕೊಳ್ಳಲಿ. ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಅವರು ಬೆಳೆಯಬೇಕು ಎಂದರೆ ಸರ್ಕಾರ ಹಾಗೂ ಜನ ಬೇಕು” ಎಂದು ಉತ್ತರ ನೀಡಿದರು.

ಬಿಬಿಎಂಪಿ ಸರ್ಕಾರಿ ಕಚೇರಿಗಳಿಗೆ ತೆರಿಗೆ ಬಾಕಿ ಬಗ್ಗೆ ನೋಟಿಸ್ ನೀಡಿರುವ ಬಗ್ಗೆ, “ಹೌದು ಹಣ ಸಂಗ್ರಹ ಮಾಡಬೇಕಲ್ಲವೇ. ಬಿಬಿಎಂಪಿ ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಸರ್ಕಾರಿ ಕಚೇರಿಯಾದರೂ ಒಂದಷ್ಟು ಬಿಲ್ ಗಳನ್ನು ಕಟ್ಟಲೇ ಬೇಕು. ವಿದ್ಯುತ್ ಬಿಲ್ ಸೇರಿದಂತೆ ಇತರೇ ಬಿಲ್ ಗಳನ್ನು ಕಟ್ಟಲೇಬೇಕು. ಈ ವಿಚಾರ ಕಳೆದ 20- 30 ವರ್ಷಗಳಿಂದ ನಡೆಯುತ್ತಿದೆ” ಎಂದರು.

ರಾಜಭವನ, ವಿಧಾನಸೌಧಗಳು ಈ ವ್ಯಾಪ್ತಿಗೆ ಬರುತ್ತವೆಯೇ ಎಂದಾಗ, “ಹೌದು ಎಲ್ಲರೂ ತೆರಿಗೆ ಪಾವತಿ ಮಾಡಲೇಬೇಕು” ಎಂದರು.

ಸರ್ಕಾರಿ ಕಟ್ಟಡಗಳ ಆಸ್ತಿ ತೆರಿಗೆ ಬಾಕಿ ರೂ.150 ಕೋಟಿಗೂ ಹೆಚ್ಚು ಬಾಕಿ ಇದೆ ಎಂದು ಮರು ಪ್ರಶ್ನಿಸಿದಾಗ, “ಎಲ್ಲವನ್ನು ಸಂಗ್ರಹ ಮಾಡಲಾಗುವುದು. ಯಾವುದಕ್ಕೂ ನಾವು ವಿನಾಯಿತಿ ನೀಡಬಾರದು. ಎಲ್ಲರೂ ತೆರಿಗೆ ಕಟ್ಟಲೇಬೇಕು. ವಿದ್ಯುತ್ ಪೂರೈಕೆದಾರರಿಗೆ ನಾವು ಬಿಲ್ ನೀಡದೇ ಇದ್ದರೇ ಶೇ 18 ರಷ್ಟು ಬಡ್ಡಿ ತೆರಬೇಕಾಗುತ್ತದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments