ಸಾರಿಗೆ ವಲಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ ಭಾರತ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಬೆನ್ನಲ್ಲೇ ಈಗ ಜಲಜನಕ ಇಂಧನ ಚಾಲಿತ ಸಾರಿಗೆಗೆ ಮುನ್ನುಡಿ ಬರೆದಿದೆ. ದೇಶದ ಹತ್ತು ಮಹಾನ್ ನಗರಗಳಲ್ಲಿ ಹಸಿರು ಹೈಡ್ರೋಜನ್ (ಜಲಜನಕ) ಇಂಧನ ಆಧಾರಿತ ವಾಹನಗಳನ್ನು ಓಡಾಡಲಿವೆ.
2023ರ ಪ್ರಥಮದಲ್ಲೇ “ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್” ಆರಂಭಿಸಿ ಇದಕ್ಕೆ ಮುನ್ನುಡಿ ಬರೆದಿದ್ದ ಭಾರತ ಎರಡೇ ವರ್ಷದಲ್ಲಿ ಹಸಿರು ಹೈಡ್ರೋಜನ್ ತುಂಬಿದ ವಾಹನ ಸಾರಿಗೆಗೆ ಚಾಲನೆ ನೀಡಲು ಸಜ್ಜಾಗಿದೆ.
ಜಲಜನಕದ 5 ಪೈಲಟ್ ಯೋಜನೆ
ದೇಶದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೇ ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಟ್ಟು ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಶನ್ ಸ್ಥಾಪಿಸಿದ್ದ ಎನ್‌ಡಿಎ ಸರ್ಕಾರ, ಈಗ ಈ ಮಿಶನ್‌ನ ಒಂದು ಭಾಗವಾಗಿ ₹208 ಕೋಟಿ ಆರ್ಥಿಕ ನೆರವು ಕಲ್ಪಿಸಿ ಜಲಜನಕ ಇಂಧನ ಚಾಲಿತ 5 ಹೊಸ ಪೈಲಟ್ ಯೋಜನೆಗಳಿಗೆ ಚಾಲನೆ ನೀಡಿದೆ.
ಸಾರಿಗೆ ವಲಯದಲ್ಲಿ ಪ್ರಮುಖವಾಗಿ ಬಸ್ ಮತ್ತು ಟ್ರಕ್‌ಗಳಲ್ಲಿ ಇಂಧನವಾಗಿ ಹಸಿರು ಹೈಡ್ರೋಜನ್ ಬಳಕೆ ಮತ್ತು ಹೈಡ್ರೋಜನ್ ಇಂಧನ ತುಂಬುವ ಕೇಂದ್ರಗಳ ಸ್ಥಾಪನೆಗೆ ಮುಂದಡಿ ಇಟ್ಟಿರುವ ಸರ್ಕಾರ, ಹಸಿರು ಹೈಡ್ರೋಜನ್ ವಲಯದಲ್ಲಿ ವಾಣಿಜ್ಯಿಕವಾಗಿ ಕಾರ್ಯ ಸಾಧುವಾಗುವಂತಹ ತಂತ್ರಜ್ಞಾನ ಅಳವಡಿಸಿ, ಮೂಲಸೌಕರ್ಯ ದೊಂದಿಗೆ ಮತ್ತಷ್ಟು ಅಭಿವೃದ್ಧಿಪಡಿಸಲು ಸಹ ಕಾರ್ಯ ಯೋಜನೆ ರೂಪಿಸಿದೆ.
ದೇಶಾದ್ಯಂತ 10 ವಿಭಿನ್ನ ಮಾರ್ಗಗಳಲ್ಲಿ ಈ ವಾಹನ ಚಲಿಸಲಿವೆ. ಗ್ರೇಟರ್ ನೋಯ್ಡಾ – ದೆಹಲಿ – ಆಗ್ರಾ, ಭುವನೇಶ್ವರ – ಕೊನಾರ್ಕ್ – ಪುರಿ, ಅಹಮದಾಬಾದ್ – ವಡೋದರಾ – ಸೂರತ್, ಸಾಹಿಬಾಬಾದ್ – ಫರಿದಾಬಾದ್ – ದೆಹಲಿ, ಪುಣೆ – ಮುಂಬೈ, ಜಮ್ಶೆಡ್ಪುರ – ಕಳಿಂಗ ನಗರ, ತಿರುವನಂತಪುರಂ – ಕೊಚ್ಚಿ, ಕೊಚ್ಚಿ – ಎಡಪ್ಪಳ್ಳಿ, ಜಾಮ್ನಗರ – ಅಹಮದಾಬಾದ್ ಮತ್ತು NH-16 ವಿಶಾಖಪಟ್ಟಣ – ಬಯ್ಯವರಂ ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.
ಆರಂಭದಲ್ಲಿ 37 ಹೈಡ್ರೋಜನ್ ವಾಹನ
ವಿವಿಧ ರಾಜ್ಯಗಳ ಈ ಮಹಾನ್ ನಗರಗಳಲ್ಲಿ ಮೊದಲ ಹಂತದಲ್ಲಿ ಒಟ್ಟು 37 ಹೈಡ್ರೋಜನ್ ಇಂಧನ ತುಂಬಿದ ಬಸ್ ಮತ್ತು ಟ್ರಕ್ ಗಳು ಸಂಚರಿಸಲಿವೆ. ಪ್ರಾಯೋಗಿಕವಾಗಿ 15 ಹೈಡ್ರೋಜನ್ ಇಂಧನ ಕೋಶ ಆಧಾರಿತ ಮತ್ತು 22 ಹೈಡ್ರೋಜನ್ ಆಂತರಿಕ ಎಂಜಿನ್ ಆಧಾರಿತ ವಾಹನಗಳು ಸೇರಿವೆ.
9 ಹೈಡ್ರೋಜನ್ ಇಂಧನ ಕೇಂದ್ರ ಸ್ಥಾಪನೆ
37 ವಾಹನಗಳಿಗೆ ಹೈಡ್ರೋಜನ್ ಇಂಧನ ತುಂಬಲು 9 ಕಡೆ ಹಸಿರು ಹೈಡ್ರೋಜನ್ ಇಂಧನ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ದೇಶದ ಹತ್ತು ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ಇಂಧನ ಚಲಾಯಿಸುವ 5 ಪೈಲಟ್ ಯೋಜನೆಗಳ ಹೊಣೆಯನ್ನು TATA ಮೋಟಾರ್ಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, NTPC, ANERT, ಅಶೋಕ್ ಲೇಲ್ಯಾಂಡ್, HPCL, BPCL ಮತ್ತು IOCL ನಂತಹ ಪ್ರಮುಖ ಕಂಪನಿಗಳಿಗೆ ನೀಡಲಾಗಿದೆ. ಕಂಪನಿಗಳ ಕ್ಷಿಪ್ರ ಕಾರ್ಯಾಚರಣೆಗೆ ಗಡುವು ನೀಡಿದ್ದು, ಮುಂದಿನ 18 ರಿಂದ 24 ತಿಂಗಳುಗಳಲ್ಲಿ “ಹಸಿರು ಹೈಡ್ರೋಜನ್ ಚಾಲಿತ ವಾಹನ”ಗಳ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ.
“ಗ್ರೀನ್ ಹೈಡ್ರೋಜನ್ ಉತ್ಖನನ, ಉತ್ಪಾದನೆ ಮತ್ತು ಬಳಕೆಯಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಮೊನ್ನೆ ಮೊನ್ನೆ ಭಾರತಕ್ಕೆ ಭೇಟಿ ನೀಡಿದ 27 ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದ ಸದಸ್ಯರೂ ನವೀಕರಿಸಬಹುದಾದ ಇಂಧನದಲ್ಲಿ ಭಾರತದ ಮಹತ್ಸಾಧನೆ ಕಂಡು ಬೆರಗಾದರು. ಹೈಡ್ರೋಜನ್ ವಾಹನ ಸಾರಿಗೆ ವ್ಯವಸ್ಥೆಯ ಈ ಕ್ರಮ ಭಾರತಕ್ಕೆ ಭವಿಷ್ಯದ ದಿಕ್ಸೂಚಿಯಾಗಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.