ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದ ವಿರುದ್ಧ ಬಿಜೆಪಿ ನಿಯೋಗ ಸೋಮವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದೆ.
ವಿಧಾನಪರಿಷತ್ತಿನ ಸದಸ್ಯರಾದ ಎನ್.ರವಿಕುಮಾರ್, ಶಶೀಲ್ ನಮೋಶಿ, ಹನುಮಂತ ನಿರಾಣಿ, ಡಿ.ಎಸ್.ಅರುಣ್, ಶಿಕ್ಷಣ ವಿಭಾಗದ ರಾಜ್ಯ ಸಂಚಾಲಕ ಡಾ.ಸಿ.ಬಿ.ಶಶಿಧರ್, ರಾಜ್ಯ ಸಹ ಸಂಚಾಲಕರಾದ ಎಂ.ಜಿ.ಭಟ್, ಹರೀಶ್.ಕೆ, ಡಾ.ರಾಘವೇಂದ್ರ ಹಾಗೂ ಅಶ್ವಿನಿ ಶಂಕರ್ ಅವರು ನಿಯೋಗದಲ್ಲಿ ಇದ್ದರು.
“9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರವು ಅವೈಜ್ಞಾನಿಕ, ಅಸಾಂವಿಧಾನಿಕ ಮಾತ್ರವಲ್ಲದೆ ಇದೊಂದು ಅನ್ಯಾಯದ ನಿರ್ಧಾರ ಎಂದು ಗಮನ ಸೆಳೆಯಲಾಯಿತು. ಅದರಿಂದ ಆಗುವ ದುಷ್ಪರಿಣಾಮಗಳ ಕುರಿತು ಗಮನಕ್ಕೆ ತರಲಾಯಿತು. ರಾಜ್ಯ ಸರಕಾರದ ಈ ಕ್ರಮವನ್ನು ತಕ್ಷಣ ಹಿಂಪಡೆದುಕೊಳ್ಳುವಂತೆ ಸೂಚಿಸಿ, ಸೂಕ್ತ ನಿರ್ಧಾರ ಕೈಗೊಂಡು ಲಕ್ಷಾಂತರ ಗ್ರಾಮೀಣ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕು” ಎಂದು ಕೋರಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?
ಕರ್ನಾಟಕದ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿರುವ ತಮಗೆ ತಿಳಿದಿರುವ ಹಾಗೆ ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಅಭಿವೃದ್ಧಿಯ ಭದ್ರ ಬುನಾದಿಯು ಆ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಆಧಾರಿತವಾಗಿರುತ್ತದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ನೊಂದಾಯಿಸಿಕೊಂಡಂತೆ ಆ ರಾಜ್ಯದ ಸಾಮಾಜಿಕ, ಆರ್ಥಿಕ ಹಾಗೂ ಶಿಕ್ಷಣ ಕ್ಷೇತ್ರಗಳು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ಶಿಕ್ಷಣ ವಿಕೇಂದ್ರಿಕರಣದ ಪರಿಣಾಮವಾಗಿ ಈ ಹಿಂದನ ಭಾರತೀಯ ಜನತಾ ಪಕ್ಷವು 2019-20ರಲ್ಲಿ ತನ್ನ ಅಧಿಕಾರವಧಿಯಲ್ಲಿ ರಾಜ್ಯಾದ್ಯಂತ 10 ನೂತನ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ. ಒಂದು ಐತಿಹಾಸಿಕ ನಿರ್ಣಯವನ್ನು ಕೈಗೊಂಡು ಗ್ರಾಮಾಂತರ ಪ್ರದೇಶದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾರಂಬಿಸಿತ್ತು.
ಈಗಾಗಲೇ 2019 ರಿಂದ ಇಲ್ಲಿಯವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಾಂಗ ಮಾಡುತ್ತಿದ್ದಾರೆ. ಅದರಲ್ಲೂ ಬಹುತೇಕ ಹೆಣ್ಣು ಮಕ್ಕಳು ನೊಂದಾಯಿಸಿಕೊಂಡು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಲುವಾಗಿ ವಿದ್ಯೆಯನ್ನು ಪಡೆಯುತ್ತಿದ್ದಾರೆ. ಇಂತಹ ಸಂದರ್ಬದಲ್ಲಿ ಶ್ರೀ ಸಿದ್ದರಾಮಯ್ಯನವರ ಸಾರಥ್ಯದ ರಾಜ್ಯ ಕಾಂಗ್ರೆಸ್ ಸರ್ಕಾರ 9 ವಿಶ್ವವಿದ್ಯಾಲಯಗಳನ್ನು ಅವೈಜ್ಞಾನಿಕವಾಗಿ ಮುಚ್ಚಿಹಾಕುವ ಹುನ್ನಾರ ನಡೆಸುತ್ತಿರುವುದನ್ನು ಭಾರತೀಯ ಜನತಾ ಪಕ್ಷದ ಶಿಕ್ಷಕರ ಪ್ರಕೋಷವು ಬಲವಾಗಿ ಖಂಡಿಸುತ್ತದೆ.
ಈ ಹಿಂದಿನ ಭಾರತೀಯ ಜನತಾ ಪಕ್ಷದ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳು ನಿಜವಾದ ಅರ್ಥದಲ್ಲಿ ಬಡ ಮಕ್ಕಳಿಗೆ ಒಂದು ದೊಡ್ಡ ವರದಾನವೇ ಆಗಿದೆ.
ಹಾಗಾಗಿ ಈಗಿನ ರಾಜ್ಯ ಸರ್ಕಾರ ಶಿಕ್ಷಣ ಪರ, ಅಭಿವೃದ್ದಿ ಪರವಾದಲ್ಲಿ ಇವೆಲ್ಲವುದನ್ನು ಗಮನಕ್ಕೆ ತೆಗೆದುಕೊಂಡು ತಮ್ಮ ಅವೈಜ್ಞಾನಿಕ, ಅಸಾಂವಿಧಾನಿಕ ನಿರ್ಧಾರ ಕೈಬಿಟ್ಟು, ಈ ತಕ್ಷಣ ಆದೇಶವನ್ನು ಹಿಂಪಡೆಯಬೇಕಾಗಿದೆ. ಭಾರತೀಯ ಜನತಾ ಪಕ್ಷವು ಈ ನಾಡಿನ ಅತ್ಯಂತ ಜವಬ್ದಾರಿಯುತ ಪ್ರತಿಪಕ್ಷವಾಗಿ ಇಂತಹ ಅನ್ಯಾಯವಾಗಲು ಎಂದಿಗೂ ಬಿಡುವುದಿಲ್ಲ. ಈಗಾಗಲೇ ರಾಜ್ಯದೆಲ್ಲೆಡೆ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ವಿವಿಧ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಹಲವಾರು ರೀತಿಯ ಹೋರಾಟಗಳು ಪ್ರಾರಂಭವಾಗಿದೆ.
ಇದರ ಅನ್ವಯ ಭಾರತೀಯ ಜನತಾ ಪಕ್ಷದ ರಾಜ್ಯ ಶಿಕ್ಷಕರ ಪ್ರಕೋಷವು ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ರಾಜ್ಯದ ಸಾಂವಿಧಾನಿಕ ಘನವೆತ್ತ ರಾಜ್ಯಪಾಲರಾಗಿರುವ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ರಾಜ್ಯ ಸರ್ಕಾರದ ಈ ಕ್ರಮವನ್ನು ಈ ತಕ್ಷಣ ಹಿಂಪಡೆದುಕೊಳ್ಳುವಂತೆ ಸೂಚಿಸಿ, ಸೂಕ್ತ ನಿರ್ಧಾರ ಕೈಗೊಂಡು, ಲಕ್ಷಾಂತರ ಗ್ರಾಮೀಣ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ.