Homeಕರ್ನಾಟಕನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದು ಅಪಪ್ರಚಾರ: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಹುಟ್ಟು ಕಾಂಗ್ರೆಸಿಗ, ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂಬುದು ಅಪಪ್ರಚಾರ: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ನನ್ನ ವೈಯಕ್ತಿಕ ನಂಬಿಕೆ, ನಾನು ಪಾಲಿಸುತ್ತೇನೆ. ಇದಕ್ಕೆ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, “ಇನ್ನು ಅನೇಕ ವಿಚಾರಗಳಲ್ಲಿ ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸದ್ಗುರು ಅವರು ನನ್ನ ಮನೆಗೆ ಬಂದು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದರು. ಅವರು ನಮ್ಮ ಮೈಸೂರಿನವರು. ಅವರ ಜ್ಞಾನವನ್ನು ನಾನು ಮೆಚ್ಚುತ್ತೇನೆ. ಕಳೆದ ವರ್ಷ ನನ್ನ ಮಗಳು ಆ ಕಾರ್ಯಕ್ರಮಕ್ಕೆ ಹೋಗಿದ್ದಳು. ಈ ಬಾರಿ ಅವರು ನಮ್ಮ ಮನೆಗೆ ಬಂದು ನನ್ನ ಹಾಗೂ ನನ್ನ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ಈಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಇಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ನಾನು ಹಿಂದು, ಎಲ್ಲಾ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಿದ್ಧಾಂತ ಹೊಂದಿದೆ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರು ಇದನ್ನೇ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಆಚರಣೆ ಮಾಡುವುದನ್ನು ನೋಡಿದ್ದೇನೆ. ಅವರು ನಮಗಿಂತ ಹೆಚ್ಚಾಗಿ ಭಾರತೀಯತೆಯನ್ನು ಅಳವಡಿಸಿಕೊಂಡಿದ್ದಾರೆ. ನಾವು ಅಂತಹ ನಾಯಕತ್ವವನ್ನು ಹೊಂದಿದ್ದೇವೆ. ನಮ್ಮ ಅಧ್ಯಕ್ಷರ ಹೆಸರು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಎಂದರೆ ಶಿವ. ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರಾ?” ಎಂದು ಹೇಳಿದರು.

ಹಿಂದೂವಾಗಿ ಹುಟ್ಟಿದ್ದು, ಹಿಂದೂವಾಗಿಯೇ ಸಾಯುತ್ತೇನೆ

“ನಾನು ಜನ್ಮತಃ ಹಿಂದು. ಹಿಂದೂವಾಗಿಯೇ ಸಾಯುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನಾನು ಜೈಲಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತೆ. ಜೈನರ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲಾ ಧರ್ಮದವರು ನನಗೆ ಆಶೀರ್ವಾದ ಮಾಡುತ್ತಾರೆ. ನಾನು ದರ್ಗಾ, ಚರ್ಚ್ ಗೆ ಹೋಗುತ್ತೇನೆ. ಎಲ್ಲಾ ಸಮುದಾಯಗಳು ನನ್ನನ್ನು ಪ್ರೀತಿಸುತ್ತವೆ” ಎಂದು ತಿಳಿಸಿದರು.

ಶಶಿತರೂರ್ ಅವರು ಬಿಜೆಪಿಗೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ನೀವು ಬಿಜೆಪಿಗೆ ಹತ್ತಿರವಾಗುತ್ತಿದ್ದೀರಿ ಎಂಬ ಚರ್ಚೆ ಆರಂಭವಾಗಿದೆ, “ಕಾಂಗ್ರೆಸ್ ಪಕ್ಷ ಶ್ರೇಷ್ಠವಾದ ಪಕ್ಷ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ತತ್ವ, ಸಂಸ್ಕೃತಿಯೇ ಬೇರೆ. ಕೆಲವರು ಆತುರದಲ್ಲಿ ನಿರ್ಧಾರ ಕೈಗೊಳ್ಳಬಹುದು. ಪಕ್ಷಕ್ಕೆ ಏನು ಆಗುವುದಿಲ್ಲ. ನೂರು ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ. ಶಶಿ ತರೂರ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ನನ್ನನ್ನು ಇನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂಬುದಷ್ಟೇ ಅವರ ಬೇಡಿಕೆ. ಅದರ ಹೊರತಾಗಿ ಬೇರೇನೂ ಇಲ್ಲ” ಎಂದರು.

ಟೀಕೆ ಮಾಡುವವರು ಮಾಡಲಿ, ಅದನ್ನು ಸ್ವಾಗತಿಸುತ್ತೇನೆ

ಸ್ಟೀಲ್ ಬ್ರಿಡ್ಜ್ ವಿರೋಧಿಸಿದಂತೆ ಬೆಂಗಳೂರಿನಲ್ಲಿ ಟನಲ್ ರಸ್ತೆಗೆ ವಿರೋಧಿಸಿ ಬಿಜೆಪಿ 28 ಕ್ಷೇತ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕೇಳಿದಾಗ. “ಅಂದು ಜಾರ್ಜ್ ಅವರು ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾಗಿದ್ದರು, ಬಿಜೆಪಿ ವಿರೋಧಿಸಿತ್ತು. ಬೆಂಗಳೂರಿನ ರಸ್ತೆ ಪರಿಸ್ಥಿತಿಯನ್ನು ದೇವರೇ ಬಂದರೂ ಒಂದೆರಡು ವರ್ಷದಲ್ಲಿ ಸರಿಪಡಿಸಲು ಆಗುವುದಿಲ್ಲ ಎಂದು ಹೇಳಿದ್ದನ್ನು ಟೀಕಿಸಿದ್ದಾರೆ. ಅವರು ಟೀಕೆ ಮಾಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಅವರು ಟೀಕೆ ಮಾಡಿದಷ್ಟು ಒಳ್ಳೆಯದು. ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ನಾನು ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಿಲ್ಲ. ನಾನು ದೀರ್ಘಾವಧಿಯ ಪರಿಹಾರಕ್ಕೆ ಮುಂದಾಗಿದ್ದೇನೆ” ಎಂದು ಹೇಳಿದರು.

ಕುಮಾರಸ್ವಾಮಿದ್ದು ಬರೀ ರಾಜಕೀಯ

ಬಿಬಿಎಂಪಿ ವಿಭಜನೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದು ಕೇಂಪೇಗೌಡರ ಹೆಸರು ನಾಶ ಮಾಡಲು ಹೊರಟಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಬರೀ ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಏನು ಮಾಡಿದ್ದಾರೆ? ನಾನು ಕೃಷ್ಣಾ ಅವರ ಕಾಲದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಪಾಲಿಕೆ ವ್ಯಾಪ್ತಿ ಹೆಬ್ಬಾಳ, ಆರ್ ಆರ್ ನಗರ ಮುಖ್ಯದ್ವಾರ, ಬನಶಂಕರಿ, ಕೆ.ಆರ್ ಪುರಂದವರೆಗೂ ಮಾತ್ರ ಇತ್ತು. ಅವರ ಸರ್ಕಾರ ಬಂದ ನಂತರ ಇದನ್ನು ವಿಸ್ತರಣೆ ಮಾಡಿದ್ದು ಯಾಕೆ? ಬೆಂಗಳೂರು ವಿಸ್ತರಣೆಯಾಗುತ್ತಿದೆ. ಎಲೆಕ್ಟಾನಿಕ್ ಸಿಟಿಯೋ ಪ್ರತ್ಯೇಕ ಬೆಂಗಳೂರು ಆಗಿದೆ. ಅಲ್ಲಿನ ಆದಾಯ, ಯೋಜನೆ ಏನಾಗಬೇಕು? ಬೆಂಗಳೂರು ಎಂದರೆ, ಸದಾಶಿವನಗರ, ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಮಾತ್ರವಲ್ಲ. 2023 ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ನೋಟಿಫಿಕೇಶನ್ ಮಾಡಿ ವೈಟ್ ಫೀಲ್ಡ್ ಭಾಗದಲ್ಲಿ 90 ಮೀಟರ್ ರಸ್ತೆ (ಐಆರ್ ಆರ್) ಮಾಡಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಒಳಗೆ 19 ಕಿ.ಮೀ ಉದ್ದದ ರಸ್ತೆ ಮಾಡಲು ಭೂಸ್ವಾಧಿನಕ್ಕಾಗಿಯೇ 25 ಸಾವಿರ ಕೋಟಿ ಅಗತ್ಯವಿದೆ. ಇದನ್ನು ಯಾರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ. ಈ ಭಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಾಗಿದೆ. ಇದನ್ನು ನೋಡದೇ ಅವರು ನೋಟಿಫಿಕೇಶನ್ ಹೊರಡಿಸಿದ್ದರು. ಟೀಕೆ ಮಾಡುವವರು ಮಾಡಲಿ. ನಾನು ಪ್ರಗತಿ ಮಾರ್ಗದಲ್ಲಿ ಮುನ್ನಡೆಯಲು ಬಯಸುತ್ತೇವೆ” ಎಂದು ತಿಳಿಸಿದರು.

ಮೋಹನ್ ದಾಸ್ ಪೈ ರಾಜಕೀಯ ಪ್ರವೇಶಿಸಲಿ

“ಮೋಹನ್ ದಾಸ್ ಪೈ ಹಿರಿಯರು, ಅವರ ಬಗ್ಗೆ ನಮಗೆ ಗೌರವವಿದೆ. ಅವರು ಕೂಡ ರಾಜಕೀಯಕ್ಕೆ ಬರಲಿ. ರಾಜಕೀಯದ ಪ್ರಕ್ರಿಯೆಯಲ್ಲಿ ಭಾಗಿಯಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸಿ ಸಚಿವರಾಗಲಿ, ಸಂಸದರಾಗಲಿ. ಆಗ ಅವರಿಗೆ ಇಲ್ಲಿನ ಕಷ್ಟಗಲು ಅರ್ಥವಾಗುತ್ತದೆ. ಸಲಹೆ ನೀಡುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅವರು ಬೆಂಗಳೂರಿಗೆ ಕೊಡುಗೆ ನೀಡಿದ್ದಾರೆ. ಚುನಾವಣೆ ರಾಜಕೀಯಕ್ಕೂ ಬರಲಿ, ಆಗ ಅವರಿಗೆ ವ್ಯವಸ್ಥೆ ಅರಿವಾಗುತ್ತದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments