ರಾಜ್ಯದಲ್ಲಿ ಹೆಚ್ಚು ಕಡಿಮೆ ಶೇ.90 ರಷ್ಟು ಬರಗಾಲ ಉಂಟಾಗಿದೆ. ಸರ್ಕಾರ ಸಹಾಯಧನ ಕೊಟ್ಟರೂ, ನೀರು ಕೊಡಬಹುದು. ಆದರೆ ಬೆಳೆಯ ನಷ್ಟವನ್ನು ತುಂಬಿಕೊಡಲು ಸಾಧ್ಯವಾಗುವುದಿಲ್ಲ. ನಷ್ಟ ಭರಿಸುತ್ತೇವೆ ಎಂದರೆ ಅದು ರೈತರನ್ನು ತಪ್ಪು ದಾರಿಗೆ ಎಳೆದಂತಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಉದ್ಘಾಟಿಸಿ ಕೃಷಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಅವರು, ಸುಮಾರು 33 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಎನ್.ಡಿ.ಆರ್‍ಎಫ್ ಮಾರ್ಗಸೂಚಿಯ ಪ್ರಕಾರ ಸರ್ಕಾರ 17900 ಕೋಟಿ ರೂ.ಗಳ ಪರಿಹಾರ ಕೇಳಿದ್ದೇವೆ. ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು” ಎಂದರು.
“16 ಸಾವಿರ ಕೋಟಿಯಷ್ಟು ರೈತರಿಗೆ ನಷ್ಟವಾಗುತ್ತದೆ. ಬೆಳೆವಿಮೆ ಮಾಡಿದ್ದರೂ ಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರನ್ನು ಕಾಪಾಡುವುದು ಸರ್ಕಾರದ ಹಾಗೂ ವಿವಿಗಳ ಜವಾಬ್ದಾರಿ. ಕೃಷಿ ವಿವಿಗಳ ಪಾತ್ರ ಮಹತ್ವದ್ದು. ದೇಶದಲ್ಲಿ ಕೃಷಿ ಕ್ಷೇತ್ರ್ರದ ಮೇಲೆ ಆಹಾರಕ್ಕಾಗಿ ಅವಲಂಬನೆಯಾಗಿರುತ್ತಾರೆ. ಅವರಿಗೆ ಆಹಾರದ ಉತ್ಪಾದನೆಯಾಗಬೇಕು ಎಂದರು.
“ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕು. ಇದಾಗಬೇಕಾದರೆ ಹೊಸ ತಳಿಗಳು, ಹೊಸ ಔಷಧ, ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರಿಗೆ ನ್ಯಾಯಯುತ ಬೆಲೆ, ಆಹಾರ ಸಂಗ್ರಹಣೆಗೆ ಗೋದಾಮುಗಳು ಆಗಬೇಕು ಇದ್ದಾಗ ಮಾತ್ರ ಸುಸ್ಥಿರವಾದ ಕೃಷಿ ಬೆಳವಣಿಗೆ ಆಗುತ್ತದೆ” ಎಂದು ಹೇಳಿದರು.
“ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರಾಜ್ಯದಲ್ಲಿ ಸ್ಥಾಪನೆಗೊಂಡ ಮೊದಲ ಕೃಷಿವಿಶ್ವವಿದ್ಯಾಲಯ. 6 ದಶಕಗಳಿಂದ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಾಜ್ಯದ ರೈತರಿಗೆ ಕೃಷಿಯಲ್ಲಿ ಆಗಿರುವ ಆವಿಷ್ಕಾರ ಹಾಗೂ ಬೆಳವಣಿಗೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾ ಬಂದಿದೆ. ಕೃಷಿಕರಿಗೆ ವಿಶ್ವವಿದ್ಯಾಲಯದಲ್ಲಿ ಆಗುವ ತಂತ್ರಜ್ಞಾನದ ಅಭಿವೃದ್ಧಿ, ಹೊಸ ತಳಿಗಳು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮುಂತಾದವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು”
ಎಂದರು.
“ಕೃಷಿ ವಿದ್ಯಾಲಯ ಕೇವಲ ಕೃಷಿ ಪದವೀಧರರನ್ನು ತಯಾರು ಮಾಡುವ ಸಂಸ್ಥೆಯಲ್ಲ. ಕೃಷಿ ವಿದ್ಯಾರ್ಥಿಗಳನ್ನು ತಯಾರಿಸುವ ಜೊತೆಗೆ ಸಂಶೋಧನೆಗಳಿಗೆ ಒತ್ತು ನೀಡಬೇಕು. ನಮ್ಮ ರಾಜ್ಯ ಇಡೀ ದೇಶದಲ್ಲಿ ರಾಜಸ್ತಾನವನ್ನು ಬಿಟ್ಟರೆ ಹೆಚ್ಚು ಒಣ ಭೂಮಿ ಇರುವ ರಾಜ್ಯ. ಹೆಚ್ಚು ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ನಾವು ಎಲ್ಲ ರೈತರೂ ಕೃಷಿಯನ್ನು ಬಿಡದಂತೆ ಮಾಡಬೇಕಾದರೆ, ಕೃಷಿ ಲಾಭದಾಯಕವಾಗಬೇಕು. ಕೃಷಿ ಲಾಭದಾಯಕವಾಗದೇ ಹೋದೆ ಬಹಳಷ್ಟು ಜನ ರೈತರು ಕೃಷಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕಡಿಮೆ ನೀರಿನಲ್ಲಿಯೂ ಬೆಳೆಯುವಂಥ ತಳಿಗಳು ಅಗತ್ಯ ಕೃಷಿ ವಿವಿ 5 ಹೊಸ ತಳಿಗಳನ್ನು ಬಿಡುಗಡೆ ಮಾಡಿರುವುದು ಸಂತೋಷ. ತಳಿಗಳು ನೀರು ಕಡಿಮೆಯಿದ್ದಾಗಲೂ ಬೆಳೆಯುವುದು ಸಾಧ್ಯವಿರಬೇಕು” ಎಂದರು.