Homeಕರ್ನಾಟಕ5,900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದೀರಿ, ಸಾರಿಗೆ ಸಂಸ್ಥೆಗಳ ಪಾಡೇನು: ಆರ್‌ ಅಶೋಕ್‌ಗೆ ರಾಮಲಿಂಗಾರೆಡ್ಡಿ ಪ್ರಶ್ನೆ

5,900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದೀರಿ, ಸಾರಿಗೆ ಸಂಸ್ಥೆಗಳ ಪಾಡೇನು: ಆರ್‌ ಅಶೋಕ್‌ಗೆ ರಾಮಲಿಂಗಾರೆಡ್ಡಿ ಪ್ರಶ್ನೆ

“ಬಸ್ ದರ ಏರಿಕೆಗೆ ಹೊಸ ಆಯೋಗ, ಪಿಕ್ ಪಾಕೆಟ್ ಸರ್ಕಾರದ ಹೊಸ ಪ್ರಯೋಗ” ಎಂದು ಎಕ್ಸ್‌ ತಾಣದಲ್ಲಿ ಟೀಕಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಕ್ಸ್‌ ತಾಣದಲ್ಲೇ ತಿರುಗೇಟು ನೀಡಿದ್ದಾರೆ.

“ಅಶೋಕ್ ಅವರೇ, ನೀವು ಸಾರಿಗೆ ಸಚಿವರಾಗಿದ್ದವರು , ಸಾರಿಗೆ ಸಂಸ್ಥೆಗಳ‌ ಬಗ್ಗೆ ತಿಳಿದೂ ಕೂಡ ಈ ರೀತಿ ಮಾತನಾಡುತ್ತಿದ್ದಾರಾ ಎಂದರೆ ಆಶ್ಚರ್ಯವಾಗುತ್ತಿದೆ. 2013 ರಲ್ಲಿ ತಾವು ಸಾರಿಗೆ ಸಚಿವರಾಗಿದ್ದಾಗ ಬಸ್ ಪ್ರಯಾಣ ದರ 10.5% ಏರಿಕೆ ಮಾಡಿರುವುದು ಮರೆತುಬಿಟ್ಟಿದ್ದೀರಾ” ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

“ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಈಗ ಬಸ್ ದರ ಏರಿಕೆಗೆ ಪ್ರತ್ಯೇಕ ಆಯೋಗ ರಚಿಸಿ ಪಿಕ್ ಪಾಕೆಟ್ ಗಾಗಿ ಹೊಸ ಪ್ರಯೋಗ ಮಾಡಲು ಹೊರಟಿದೆ. ಆಡಳಿತ ಮಾಡುವಲ್ಲಿ ಮೂರು ಕಾಸು ಪ್ರಯೋಜನ ಇಲ್ಲದಿದ್ದರೂ ಜನರಿಗೆ ಮಂಕು ಬೂದು ಎರಚಿ ಹೊಸ ಪ್ರಯೋಗಗಳ ಮೂಲಕ ಜನರನ್ನ ಸುಲಿಗೆ ಮಾಡುವಲ್ಲಿ ಕಾಂಗ್ರೆಸ್ ಪಕ್ಷದವರು ಬಹಳ ನಿಸ್ಸೀಮರು” ಎಂದು ಆರ್ ಅಶೋಕ್‌ ಟೀಕಿಸಿದ್ದರು.

ಅಶೋಕ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, “2020 ರಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ ಬಸ್ ಪ್ರಯಾಣ ದರ 12% ಹೆಚ್ಚಳ ಮಾಡಿದಾಗ ನೀವು ಕ್ಯಾಬಿನೆಟ್ ಮಂತ್ರಿಯಾಗಿದ್ದರಲ್ಲವೇ? ಆಗ ಯಾಕೆ ವಿರೋಧ ವ್ಯಕ್ತ ಪಡಿಸಲಿಲ್ಲ. ದಿನಾಂಕ: 15/11/2021 ರಲ್ಲಿ ಎಂ.ಆರ್ ಶ್ರೀನಿವಾಸಮೂರ್ತಿ ಭಾಆಸೇ (ನಿವೃತ್ತ) ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಸಮಿತಿಯನ್ನು ತಮ್ಮದೇ ಬಿಜೆಪಿ ಸರ್ಕಾರ ರಚಿಸಿತ್ತು” ಎಂದು ನೆನಪಿಸಿದ್ದಾರೆ.

“ಅನೇಕ ಶಿಫಾರಸುಗಳೊಂದಿಗೆ ಪ್ರಮುಖವಾಗಿ, ಬಸ್ ಪ್ರಯಾಣ ದರವನ್ನು Institutional Arrangement for Revision of Bus Fares ಶೀರ್ಷಿಕೆಯಡಿಯಲ್ಲಿ KERC ಮಾದರಿಯಲ್ಲಿ ಕಾಲಕಾಲಕ್ಕೆ ಬಸ್ ದರವನ್ನು ಹೆಚ್ಚಿಸಬೇಕು, ಆಗಷ್ಟೇ ಸಾರಿಗೆ ಸಂಸ್ಥೆಗಳು ಉಳಿಯಲು ಸಾಧ್ಯವೆಂದು ಸದರಿ ಸಮಿತಿಯು ವರದಿ ನೀಡಿದ್ದು, ನೀವು ಕ್ಯಾಬೆನೆಟ್ ಮಂತ್ರಿಯಾಗಿದ್ದಾಗ ಯಾಕೆ ಈ ವರದಿಯನ್ನು ತಿರಸ್ಕರಿಸಲಿಲ್ಲ. ತಮ್ಮದೇ ಸರ್ಕಾರ ಅಂಗೀಕಾರ ಮಾಡಿದ ವರದಿಯನ್ನು ಈಗ ಸರಿಯಿಲ್ಲವೆಂದು ಹೇಳಲು ಹೊರಟ್ಟಿದ್ದೀರಾ?” ಎಂದು ಸಚಿವರು ಹರಿಹಾಯ್ದಿದ್ದಾರೆ.

ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆ‌ರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಮಾಹಿತಿಯೇ ತಮಗೆ ಇಲ್ಲವೇ” ಎಂದು ಕೇಳಿದ್ದಾರೆ.

“ತಮ್ಮದೇ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು 5,900 ಕೋಟಿ ರೂ. ನಷ್ಟದಲ್ಲಿಟ್ಟು ಹೋಗಿದ್ದು, ಈಗ ಸಾರಿಗೆ ಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ?” ಎಂದು ಸವಾಲು ಹಾಕಿದ್ದಾರೆ.

“ನನಗೆ ರಾಜಕೀಯವೇ ಮುಖ್ಯ. ಸಾರಿಗೆ ಸಂಸ್ಥೆಗಳು ಉಳಿದರೇನು? ಮುಳುಗಿದರೆ ನನಗೇನು? ಅನ್ನುವ ಮನಸ್ಥಿತಿಯೇ ತಿಳಿಯದಾಗಿದೆ. ಅಶೋಕ್ ಅವರೇ ತಾವು ಕೂಡ ಸರ್ಕಾರದ ಭಾಗವಾಗಿ ತೆಗೆದುಕೊಂಡ ಎಲ್ಲ ಕ್ರಮಗಳನ್ನು ಇಂದು ಮರೆಮಾಚಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಆತ್ಮಾವಲೋಕನ ಮಾಡಿಕೊಳ್ಳಿ” ಎಂದು ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments