ಅಣ್ಣಾಮಲೈ ಒಬ್ಬ ಅಯೋಗ್ಯ ವ್ಯಕ್ತಿ. ನಮ್ಮ ರಾಜ್ಯದಿಂದ ನಿವೃತ್ತಿ ಸಂಬಳ ತೆಗೆದುಕೊಂಡು ಇಲ್ಲಿ ಬಂದು ಪುಕ್ಸಟ್ಟೆ ಭಾಷಣ ಮಾಡುತ್ತಾರೆ. ನಮ್ಮ ಇಲಾಖೆಯಲ್ಲಿ ನ್ಯೂನತೆ ಇದೆ. ಸರಿ ಮಾಡಿಕೊಳ್ಳುತ್ತೇವೆ. ಹಳೆ ಸರ್ಕಾರದ ಶಿಕ್ಷಣ ಇಲಾಖೆ 500 ಕೋಟಿ ರೂ. ಸಾಲ ನಾವು ತೀರಿಸುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದರು.
2023-2024ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಕುರಿತು ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರ ಪ್ರತಿಕ್ರಿಯಿಸಿ, “ನಾನು ಓದುವುದರಲ್ಲಿ ಅಷ್ಟು ಬುದ್ದಿವಂತನಾಗಿರಲಿಲ್ಲ. ನಾನು ಸಹ ಫೇಲ್ ಆಗಿದ್ದೇನೆ. ನನಗೆ ಕನ್ನಡ ಅಷ್ಟು ಶುದ್ಧವಾಗಿ ಓದಲು ಬರಲ್ಲ. ಸ್ವಲ್ಪ ಉಚ್ಚಾರಣೆ ತಪ್ಪಾಗುತ್ತೆ. ನನ್ನ ಬಗ್ಗೆ ಕೆಟ್ಟ ಟ್ರೋಲ್ ಮಾಡುವವರು ಎಂದೂ ಉದ್ಧಾರಾಗಲ್ಲ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆಯ ಮಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಮ್ಮ ಇಲಾಖೆವತಿಯಿಂದ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರಿಗೆ ಧನ್ಯವಾದ ತಿಳಿಸುತ್ತೇನೆ” ಎಂದು ಹೇಳಿದರು.
“ನಮ್ಮ ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದ್ದೇವೆ. ಪಠ್ಯ ಪುಸ್ತಕ ಬದಲಾವಣೆ, ಶಿಕ್ಷಕರ ನೇಮಕ ಹೀಗೆ ಅನೇಕ ಬದಲಾವಣೆ ತಂದಿದ್ದೇವೆ. ಅನುದಾನಿತ ಶಾಲೆಗಳಿಗೂ ಶಿಕ್ಷಕರ ನೇಮಕ ಮಾಡುತ್ತೇವೆ” ಎಂದು ತಿಳಿಸಿದರು.
ಈ ವರ್ಷಕ್ಕೆ ಮಾತ್ರ ಕೃಪಾಂಕ ಅಂಕ ಸೀಮಿತ
“ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ನಾವು ಅನೇಕ ಕ್ರಮ ಕೈಗೊಂಡಿದ್ದೇವೆ. ಕೊರೊನಾ ಸಮಯದ ವಿದ್ಯಾರ್ಥಿಗಳು ಈಗ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ. ಶೇ 20 ರಷ್ಟು ಕೃಪಾಂಕ ಅಂಕ ಕೊಟ್ಟಿದ್ದೇವೆ. ಅದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ” ಎಂದರು.
ಕೊಡಗು ವಿದ್ಯಾರ್ಥಿನಿ ಕೊಲೆ ಪ್ರಕರಣ ಬಗ್ಗೆ ಮಾತನಾಡಿ, “ಕಾನೂನು ಕ್ರಮ ಕೈಗೊಳ್ಳಲಿದೆ. ರಾಜ್ಯದ ಸರ್ಕಾರಿ ಶಾಲೆಗಳ ದುರಸ್ತಿ ಕಾರ್ಯ ಮಾಡುತ್ತೇವೆ. ಸರ್ಕಾರಿ ಶಾಲೆಗೆ ಮಕ್ಕಳು ಬರಬೇಕು. ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವಂತಿಲ್ಲ” ಎಂದು ಎಚ್ಚರಿಸಿದರು.