ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಹೊಂದಿರುವ 43 ಎಐಸಿಸಿ ವೀಕ್ಷಕರನ್ನು ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿದೆ.
ವೀಕ್ಷಕರಲ್ಲಿ ರಾಜ್ಯದ ಬಿ.ಕೆ. ಹರಿಪ್ರಸಾದ್, ಬಿ.ಎಂ. ಸಂದೀಪ್, ಸೂರಜ್ ಹೆಗ್ಡೆ ಹಾಗೂ ಬಿ.ವಿ. ಶ್ರೀನಿವಾಸ್ ಅವರಿಗೆ ಸ್ಥಾನ ನೀಡಲಾಗಿದೆ. ಎಐಸಿಸಿ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯದಂತೆ ಪಕ್ಷದ ಜಿಲ್ಲಾ ಸಮಿತಿಗಳ ಪುನರಚನೆಯ ಪ್ರಕ್ರಿಯೆಯನ್ನು ಕಾಂಗ್ರೆಸ್ ಇದೇ 15ರಿಂದ ನಡೆಸಲಿದೆ.
ಗುಜರಾತ್‌ನಲ್ಲಿ ಈ ಪ್ರಕ್ರಿಯೆ ನಡೆಸಲು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿ 43 ಎಐಸಿಸಿ ವೀಕ್ಷಕರು ಹಾಗೂ 183 ಪಿಸಿಸಿ ವೀಕ್ಷಕರನ್ನು ಪಕ್ಷ ಶನಿವಾರ ನೇಮಿಸಿದೆ. ಕಾಂಗ್ರೆಸ್ ತನ್ನ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ವೀಕ್ಷಕರನ್ನು ನೇಮಿಸುತ್ತಿರುವುದು ಇದೇ ಮೊದಲು ಎಂಬುದು ವಿಶೇಷ.
ಹೈಕಮಾಂಡ್‌ಗೆ ಹರಿಪ್ರಸಾದ್ ಎಂದರೆ ಬಹಳ ನಂಬಿಕೆ
ಬಿ ಕೆ ಹರಿಪ್ರಸಾದ್ ಶಕ್ತಿ ಏನು ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. 45 ವರ್ಷದ ರಾಜಕೀಯ ಅನುಭವ ಇರುವ ಹರಿಪ್ರಸಾದ್ ಹೈಕಮಾಂಡ್ ಮತ್ತು ಗಾಂಧಿ ಕುಟುಂಬದ ನಂಬಿಕಸ್ಥ ನಾಯಕ. 19 ರಾಜ್ಯಗಳ ಎಐಸಿಸಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದವರು. ಹರಿಪ್ರಸಾದ್ ಶಿಫಾರಸ್ಸಿನ ಮೇರೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾದವರೂ ಇದ್ದಾರೆ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಬಿ ಕೆ ಹರಿಪ್ರಸಾದ್ ಕಾಂಗ್ರೆಸ್‌ನೊಳಗೆ ಹಿಂದುಳಿದ ವರ್ಗದ ಮುಂಚೂಣಿ ನಾಯಕರಲ್ಲಿ ಒಬ್ಬರು. 70ರ ದಶಕದಲ್ಲೇ ರಾಜಕೀಯ ಸೇರಿರುವ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮೂಲ ಮನೆ. ಈಡಿಗ ಸಮುದಾಯದ ಹರಿಪ್ರಸಾದ್ ರಿಗೆ ಸಿಗಬೇಕಾದ ಅವಕಾಶಗಳು ರಾಜ್ಯ ರಾಜಕಾರಣದಲ್ಲಿ ಸಿಗಲಿಲ್ಲ. 2023ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗ ಹರಿಪ್ರಸಾದ್‌ಗೆ ಪವರ್ ಫುಲ್ ಖಾತೆ ಸಿಗುತ್ತದೆ ಎಂದೇ ಜನ ಭಾವಿಸಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ.
ಅಧಿಕಾರಕ್ಕಾಗಿ ಹರಿಪ್ರಸಾದ್ ಲಾಬಿ ಮಾಡಿದ್ದಿಲ್ಲ. ಕೈ-ಬಾಯಿ ಕೆಡಿಸಿಕೊಂಡವರು ಅಲ್ಲ. ಪಕ್ಷನಿಷ್ಠೆ, ಸೈದ್ದಾಂತಿಕ ಬದ್ಧತೆ ಇರುವ ವ್ಯಕ್ತಿ. ಶೋಷಿತರ ಪರವಾಗಿ ದಿಟ್ಟದನಿಯಾಗುವ ಹರಿಪ್ರಸಾದ್ ಅವರದು ಎಂದೂ ರಾಜಿಯಾಗದ ವ್ಯಕ್ತಿತ್ವ. 2004ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸೋನಿಯಾ ಗಾಂಧಿ ಅವರೇ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಹೆಸರು ಸೂಚಿಸಿದ್ದರು. ಆದರೆ, ಸೋನಿಯಾ ಗಾಂಧಿ ಇರದ ಸಚಿವ ಸಂಪುಟದಲ್ಲಿ ನಾನಿರಲ್ಲ ಎಂದು ಸಚಿವ ಸ್ಥಾನ ತಿರಸ್ಕರಿಸಿ ಹೊರಬಂದವರು.
ಸೋನಿಯಾ ಗಾಂಧಿ ಅವರಿಗೆ ಬಿ ಕೆ ಹರಿಪ್ರಸಾದ್ ಅಷ್ಟು ನಂಬಿಕಸ್ಥ ನಾಯಕರಾಗಿ ಹತ್ತಿರವಾಗಲು ಅವರು ಪಕ್ಷಕ್ಕೆ ನೀಡಿದ ಕೊಡುಗೆ ಮತ್ತು ಪಕ್ಷದ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ರೀತಿಯೇ ಕಾರಣ. 1978ರಲ್ಲಿ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಲೋಕಸಭೆಗೆ ಸ್ಪರ್ಧಿಸಿದಾಗ, ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಬಿ ಕೆ ಹರಿಪ್ರಸಾದ್ ಮುಖ್ಯಮಂತ್ರಿ ದೇವರಾಜ ಅರಸು ಸೂಚನೆ ಮೇರೆಗೆ ಬೆಂಗಳೂರಿನಿಂದ ನೂರಾರು ಜನರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಇಂದಿರಾ ಗಾಂಧಿ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.
ಆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆದ್ದ ನಂತರ ಸ್ವತಃ ಸಂಜಯ್ ಗಾಂಧಿ ಅವರು ಹರಿಪ್ರಸಾದ್ ಕೆಲಸ ನೋಡಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದುಕೊಂಡು ಹೋಗುತ್ತಾರೆ. ಹರಿಪ್ರಸಾದ್‌ಗೆ ರಾಜಕೀಯ ಗುರು ಯಾರಾದರೂ ಇದ್ದರೆ ಅದು ಸಂಜಯ್ ಗಾಂಧಿ ಎಂಬುದು ಹರಿಪ್ರಸಾದ್ ಅವರೇ ಹೇಳುವ ಮಾತು.
ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ರೀತಿ ಹರಿಪ್ರಸಾದ್ ನೇರ ಚುನಾವಣೆಗಳನ್ನು ಎದುರಿಸಿ ಗೆದ್ದವರಲ್ಲ. ತಮ್ಮದೇ ಆದ ಗುಂಪು ಕಟ್ಟಿಕೊಂಡವರೂ ಅಲ್ಲ. ಇದು ಹರಿಪ್ರಸಾದ್ ಅವರ ಲಿಮಿಟೇಷನ್. ಇದರಾಚೆಗೆ ಅವರ ಪಕ್ಷನಿಷ್ಠ, ಸೈದ್ಧಾಂತಿಕ ನಿಲುವು, ಬುದ್ಧಿವಂತಿಕೆ, ಯೋಗ್ಯತೆಗಳನ್ನು ಪ್ರಶ್ನಿಸುವಂತಿಲ್ಲ.
ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮೇಲ್ವಿಚಾರಣೆ ಜವಾಬ್ದಾರಿ ಬಿ ಕೆ ಹರಿಪ್ರಸಾದ್ ಅವರಿಗೆ ಒಲಿದಿರುವುದರಿಂದ ಒಂದಿಷ್ಟು ಬಣ ಬಡಿದಾಟಕ್ಕೆ ಇವರು ಲಗಾಮು ಹಾಕಬುದು ಎಂಬ ನಿರೀಕ್ಷೆ ಇದೆ.