ಬರ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ, ಕೇಂದ್ರವು ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕೇಂದ್ರ ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದೆ. ಆದರೆ, ಕರ್ನಾಟಕವು 18,174 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿತ್ತು.
ರಾಜ್ಯದಲ್ಲಿ ತೀವ್ರ ಬರ ಎದುರಾಗಿದ್ದು, ಒಟ್ಟು 30 ಸಾವಿರ ಕೋಟಿ ರೂ. ನಷ್ಟವಾಗಿದೆ. ಎನ್‌ಡಿಆರ್‌ಎಫ್ ನಿಧಿಯಿಂದ ಕೇಂದ್ರವು ರಾಜ್ಯಕ್ಕೆ 18,174 ಕೋಟಿ ರೂ. ಬರ ಪರಿಹಾರ ನೀಡಬೇಕೆಂದು 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿತ್ತು.
ಆದರೆ, ಕೇಂದ್ರ ಸರ್ಕಾರ ನಯಾ ಪೈಸೆ ಬರ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಕೇಂದ್ರದ ಧೋರಣೆಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯದ ವಾದವನ್ನು ಅಲಿಸಿದ್ದ ಸುಪ್ರೀಂ ಕೋರ್ಟ್, “ರಾಜ್ಯ ಮತ್ತು ಕೇಂದ್ರಗಳ ಸಂಬಂಧ ಉತ್ತಮವಾಗಿರಬೇಕು. ರಾಜ್ಯಗಳು ಎಲ್ಲ ವಿಷಯಗಳಿಗೂ ಸುಪ್ರೀಂ ಕೋರ್ಟ್‌ಗೆ ಬರುವಂತಾಗಬಾರದು” ಎಂದು ಕೇಂದ್ರಕ್ಕೆ ಸೂಚನೆ ನೀಡಿತ್ತು.
ಈ ಬೆನ್ನಲ್ಲೇ, ಕೇಂದ್ರವು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿಸಿದೆ. ಅಲ್ಲದೆ, ನೆರೆಯ ರಾಜ್ಯ ತಮಿಳುನಾಡಿಗೆ ನೆರೆ ಪರಿಹಾರವಾಗಿ 275 ಕೋಟಿ ರೂ. ಘೋಷಿಸಿದೆ.