Homeಕರ್ನಾಟಕಎಲ್ಲ ಕ್ಷೇತ್ರಗಳಿಗೂ 2 ಸಾವಿರ ಕೋಟಿ ರೂ. ವಿತರಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಲ್ಲ ಕ್ಷೇತ್ರಗಳಿಗೂ 2 ಸಾವಿರ ಕೋಟಿ ರೂ. ವಿತರಣೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಅಪೆಂಡಿಕ್ಸ್ ಇ ನಲ್ಲಿ 4 ಸಾವಿರ ಕೋಟಿ, ಗ್ರಾಮೀಣ ರಸ್ತೆಗೆ 2 ಸಾವಿರ ಕೋಟಿ ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ‍ ಪರವಾಗಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, “ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ವಿಧಾನಸಭೆ-ಪರಿಷತ್ ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳನ್ನು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ” ಎಂದು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದರು.

“ಬಿಜೆಪಿಯವರ ಆರೋಪದಂತೆ ಆರ್ಥಿಕವಾಗಿ ರಾಜ್ಯ ಹಿನ್ನಡೆಯಾಗಿದ್ದರೆ GST ಸಂಗ್ರಹದಲ್ಲಿ ಮೊದಲ ಸ್ಥಾನಕ್ಕೆ ಹೇಗೆ ಬರುತ್ತಿತ್ತು? ಸತ್ಯದ ದಾಖಲೆಗಳನ್ನು, ಅಂಕಿ ಅಂಶಗಳನ್ನು ಜನರ ಮುಂದಿಟ್ಟು ಎದೆ ಎತ್ತಿ ಸತ್ಯ ಹೇಳಿ. ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಅತಿ ಹೆಚ್ಚು ನೋಟಿಸ್ ಕೊಟ್ಟಿರುವುದು, ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕ್ಫ್ ಆಸ್ತಿ ತೆರವುಗೊಳಿಸಲು ನೋಟಿಸ್ ಕೊಡಲಾಗಿದೆ. ಹೀಗಾಗಿ ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ” ಎಂದರು

“once a waqf property… Always a waqf property ಅಂತ ಸುಪ್ರೀಂಕೋರ್ಟ್ ಜಡ್ಜ್ ಮೆಂಟ್ ಬಂದಿವೆ. ಸಚಿವ ಜಮೀರ್ ಅವರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಪರಿಷತ್ ನಲ್ಲಿ ಈಗಾಗಲೇ ಕೊಟ್ಟಿದ್ದಾರೆ. ಬಿಜೆಪಿ 9 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿದ್ದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಲಿಲ್ಲ. ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಬಿಜೆಪಿ ಪ್ರಯತ್ನವನ್ನೇ ಮಾಡಲಿಲ್ಲ. ನಂಜುಂಡಪ್ಪ ಅವರ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕುಗಳು ಇರುವುದೇ ಉತ್ತರ ಕರ್ನಾಟಕದಲ್ಲಿ 176 ರಲ್ಲಿ 116 ತಾಲ್ಲೂಕುಗಳು ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಬೇಕು ಅಂತಲೂ ಹೇಳಿದ್ದಾರೆ. ನಂಜುಂಡಪ್ಪ ಅವರ ವರದಿಯ ಅನುಷ್ಠಾನ ಮತ್ತು ಸಾಮಾಜಿಕ, ಆರ್ಥಿಕ ಬದಲಾವಣೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿಯನ್ನು ರಚಿಸಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ 371ಜೆ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ತಿರಸ್ಕರಿಸಿದ್ದರು. ಇದು ಬಿಜೆಪಿಯ ಸತ್ಯವಾದ ಮುಖ” ಎಂದು ವಿವರಿಸಿದರು.

“ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದು, ಕಾನೂನು ಮಾಡಿದ್ದು, ಜಾರಿ ಮಾಡಿದ್ದೆಲ್ಲಾ ಕಾಂಗ್ರೆಸ್ ಸರ್ಕಾರವೇ. ಈಗ ಹೊಸದಾದ ಗೋವಿಂದರಾವ್ ಸಮಿತಿ ರಚಿಸಿರುವುದೂ ನಮ್ಮದೇ ಸರ್ಕಾರ. ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ರಕ್ತದಲ್ಲಿ ಬರೆದು ಕೊಡ್ತೀನಿ ಎಂದು ಬಸವರಾಜ ಬೊಮ್ಮಾಯಿ ಅವರು ಪ್ರಾಮಿಸ್ ಮಾಡಿದರು. ಆದರೆ ಅವರು ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದರೂ ತಮ್ಮ ಪ್ರಾಮಿಸ್ ಉಳಿಸಿಕೊಳ್ಳಲಿಲ್ಲ. ಅವರಿಗೆ ಅವಕಾಶ ಇದ್ದಾಗ ಏನೂ ಮಾಡಲಿಲ್ಲ. ಈಗಲೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಮಹದಾಯಿ ಸಮಸ್ಯೆ ಬಗೆಹರಿಸಲು ಏನೂ ಮಾಡುತ್ತಿಲ್ಲ. ಬಿಜೆಪಿ ಬರೀ ಬೊಗಳೆ” ಎಂದು ಟೀಕಿಸಿದರು.

“ರೋಣದಲ್ಲಿ 200 ಕೋಟಿ, ಹೆಚ್.ಡಿ.ಕೋಟೆಯಲ್ಲಿ ನೂರಾರು ಕೋಟಿ, ತುಮಕೂರಿನಲ್ಲಿ 1700 ಕೋಟಿ ರೂಪಾಯಿಯ ಅಭಿವೃದ್ಧಿ ಕೆಲಸಗಳನ್ನು ನಾವೇ ಉದ್ಘಾಟಿಸಿದ್ದೀವಿ. ಇವು ಉದಾಹರಣೆಗಳಷ್ಟೆ. ಪ್ರತೀ ಜಿಲ್ಲೆ, ಪ್ರತೀ ತಾಲ್ಲೂಕುಗಳಲ್ಲೂ ನೂರಾರು ಕೋಟಿಯ ಅಭಿವೃದ್ಧಿ ಕಡಲಸಗಳು ನಿರಂತರವಾಗಿ ಉದ್ಘಾಟನೆ ಆಗುತ್ತಲೇ ಇವೆ. ಬಜೆಟ್ಟಿನಲ್ಲಿ 120000 ಕೋಟಿ ಅಭಿವೃದ್ಧಿ ಹಣ ತೆಗೆದಿಡಲಾಗಿದೆ. ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ. 52009 ಕೋಟಿ ರೂಪಾಯಿ ಗ್ಯಾರಂಟಿಗಳ ಮೂಲಕ ಜನರ ಜೇಬಿಗೆ, ಜನರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಹೀಗಾಗಿ ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ” ಎಂದರು.

“ಎಲ್ಲ ಕ್ಷೇತ್ರಗಳಿಗೂ ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ವಿತರಣೆ ಮಾಡುತ್ತೇವೆ. ಆದ್ದರಿಂದ ನಮ್ಮ ಶಾಸಕರು ಎದೆ ಎತ್ತಿ ಮಾತನಾಡಿ. ಅವರ ಬಾಯಿ ಮುಚ್ಚಿಸಿ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments