Homeಕರ್ನಾಟಕವೋಲ್ವೊದಿಂದ 1,400 ಕೋಟಿ ಹೂಡಿಕೆ; ಸಿಎಂ ಸಮ್ಮುಖದಲ್ಲಿ ಒಡಂಬಡಿಕೆಗೆ ಅಂಕಿತ

ವೋಲ್ವೊದಿಂದ 1,400 ಕೋಟಿ ಹೂಡಿಕೆ; ಸಿಎಂ ಸಮ್ಮುಖದಲ್ಲಿ ಒಡಂಬಡಿಕೆಗೆ ಅಂಕಿತ

ಬಸ್ ಮತ್ತು ಟ್ರಕ್ ತಯಾರಿಕೆಗೆ ಹೆಸರಾಗಿರುವ ಸ್ವೀಡನ್‌ ಮೂಲದ ವೋಲ್ವೊ ಕಂಪನಿಯು ಹೊಸಕೋಟೆಯಲ್ಲಿರುವ ತನ್ನ ತಯಾರಿಕಾ ಸ್ಥಾವರವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 1,400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅವರ ಅಧಿಕೃತ ನಿವಾಸ `ಕಾವೇರಿ’ಯಲ್ಲಿ ಗುರುವಾರ ಒಡಂಬಡಿಕೆಗೆ ಅಂಕಿತ ಬಿದ್ದಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನೆರವೇರಿತು. ಒಡಂಬಡಿಕೆಗೆ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ವೋಲ್ವೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಮಲ್ ಬಾಲಿ ಸಹಿ ಹಾಕಿದರು.

ಇಲ್ಲಿನ ಅರಮನೆ ಆವರಣದಲ್ಲಿ ನಡೆಯತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಕ್ರಿಯವಾಗಿರುವ ವೊಲ್ವೊ ಸಂಸ್ಥೆ, ಅದರ ಭಾಗವಾಗಿ ಈ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ವೋಲ್ವೋ ಕಂಪನಿಯು 25 ವರ್ಷಗಳ ಹಿಂದೆಯೇ ರಾಜ್ಯಕ್ಕೆ ಬಂದು, ಬಂಡವಾಳ ಹೂಡಿ, ಬದಲಾವಣೆಗೆ ನಾಂದಿ ಹಾಡಿತು. ಈಗ ನಮ್ಮಲ್ಲಿ ವೋಲ್ವೊ ಎನ್ನುವುದು ಉತ್ಕೃಷ್ಟ ಗುಣಮಟ್ಟದ ಬಸ್ಸುಗಳಿಗೆ ಇನ್ನೊಂದು ಹೆಸರಾಗಿದೆ. ರಾಜ್ಯ ಸಾರಿಗೆ ನಿಗಮದ ಐಷಾರಾಮಿ ಬಸ್ಸುಗಳನ್ನು ಕೂಡ ಜನ ಇದೇ ಹೆಸರಿನಿಂದ ಕರೆಯುತ್ತಿದ್ದಾರೆ. ವೋಲ್ವೊ ಕಂಪನಿಗೆ ಸರಕಾರ ಅಗತ್ಯ ಸೌಲಭ್ಯ ಮತ್ತು ನೆರವು ಒದಗಿಸಲಿದೆ. ಕಂಪನಿಯು ತನ್ನಲ್ಲಿ ಹೆಚ್ಚಿನ ಕನ್ನಡಿಗರಿಗೆ ಕೆಲಸ ಕೊಡಬೇಕು. ಇದರಿಂದ ಸ್ಥಳೀಯರಿಗೆ ಭದ್ರತೆ ಮತ್ತು ಆರ್ಥಿಕ ಬೆಳವಣಿಗೆ ಎರಡನ್ನೂ ಸಾಧಿಸಬಹುದು” ಎಂದರು.

ವೋಲ್ವೊ ಸಿಇಒ ಮಾರ್ಟಿನ್ ಲುಂಡ್ಸ್ಟೆಡ್ ಮಾತನಾಡಿ, “ಕರ್ನಾಟಕದಲ್ಲಿ ಕಂಪನಿಯು ಪೀಣ್ಯ, ಹೊಸಕೋಟೆ ಮತ್ತು ಧಾರವಾಡ ಸಮೀಪದ ಪೀತಂಪುರದಲ್ಲಿ ತಯಾರಿಕಾ ಘಟಕಗಳನ್ನು ಹೊಂದಿದೆ. ಈಗ ನಾವು ವರ್ಷಕ್ಕೆ ಇಲ್ಲಿ 3,000 ಬಸ್/ಟ್ರಕ್ ತಯಾರಿಸುತ್ತಿದ್ದೇವೆ. ಹೊಸಕೋಟೆ ಸ್ಥಾವರದ ವಿಸ್ತರಣೆಯಿಂದ ನಾವು ವರ್ಷಕ್ಕೆ 20 ಸಾವಿರ ಬಸ್/ಟ್ರಕ್ ತಯಾರಿಸಬಹುದು. ಈ ಸಾಮರ್ಥ್ಯ ವೃದ್ಧಿಯಿಂದ ಉದ್ಯೋಗಸೃಷ್ಟಿಯೂ ಆಗಲಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತ ಮತ್ತು ಕರ್ನಾಟಕದ ಸ್ಥಾನ ಮತ್ತಷ್ಟು ಸುಭದ್ರವಾಗಲಿದೆ. ಜತೆಗೆ ಸ್ಥಳೀಯ ಮಾರುಕಟ್ಟೆ ಅಗತ್ಯಗಳನ್ನೂ ಸರಾಗವಾಗಿ ಪೂರೈಸಲು ಸಾಧ್ಯವಾಗಲಿದೆ” ಎಂದು ಹೇಳಿದರು.

“ಬೆಂಗಳೂರು ವೋಲ್ವೋ ಕಂಪನಿಯ ಪಾಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ 4ನೇ ಅತಿದೊಡ್ಡ ತಾಣವಾಗಿದೆ. ಇಲ್ಲಿರುವ ನಮ್ಮ ಜಿಸಿಸಿ ಕೇಂದ್ರದಲ್ಲಿ 3,500ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು, ಇಲ್ಲಿ ಆರ್ & ಡಿ, ಐಟಿ, ಖರೀದಿ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳನ್ನು ನಿರ್ವಹಿಸಲಾಗುತ್ತಿದೆ. ಇದಲ್ಲದೆ ಮಧ್ಯಪ್ರದೇಶದಲ್ಲಿ ಕೂಡ ಜಂಟಿ ಸಹಭಾಗಿತ್ವದ ಯೋಜನೆ ಜಾರಿಯಲ್ಲಿದೆ. ಕಂಪನಿಯ ವಹಿವಾಟು ಈಗ ವರ್ಷಕ್ಕೆ 50 ಬಿಲಿಯನ್ ಡಾಲರ್ ದಾಟಿದೆ” ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments