108 ಆ್ಯಂಬುಲೆನ್ಸ್‌ಗಳ ನಿರ್ವಹಣೆಯನ್ನ ಖಾಸಗಿ ಏಜನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “108 ಆ್ಯಂಬುಲೆನ್ಸ್‌ಗಳನ್ನು ಇಲ್ಲಿಯವರೆಗೆ ಖಾಸಗಿ ಏಜನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಹೀಗಾಗಿ ಇನ್ಮುಂದೆ ರಾಜ್ಯ ಸರ್ಕಾರವೇ 108 ಆ್ಯಂಬುಲೆನ್ಸ್ ನಿರ್ವಹಣೆಗೆ ಸಿದ್ಧತೆ ಮಾಡಿಕೊಂಡಿದೆ” ಎಂದರು.
“ಈಗಾಗಲೇ ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ. 108 ಆ್ಯಂಬುಲೆನ್ಸ್‌ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಸರ್ಕಾರದಿಂದ ಏಜನ್ಸಿಗೆ ಹಣ ಪಾವತಿಯಾದರೂ, ಆ್ಯಂಬುಲೆನ್ಸ್ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ” ಎಂದು ಹೇಳಿದರು.
“108 ಆ್ಯಂಬುಲೆನ್ಸ್‌ಗಳ ಮಾಲಿಕತ್ವ ಸರ್ಕಾರದ ಬಳಿ ಇದೆ. ಡಿಸೇಲ್, ಪೆಟ್ರೋಲ್ ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿತ್ತು. ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜನ್ಸಿಯವರು ನಿರ್ವಹಣೆ ಮಾಡುತ್ತಿದ್ದರು. ಏಜನ್ಸಿಯ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ಹಣ ಉಳಿತಾಯವಾಗಲಿದೆ” ಎಂದು ಹೇಳಿದರು.
“ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಮತ್ತು ಎಸ್ಎನ್ಸಿಯು ಹಾಗೂ ಐಸಿಯುದಲ್ಲಿ ಕಾರ್ಯ ನಿರ್ವಹಿಸುವ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ” ಎಂದು ತಿಳಿಸಿದರು.
ಶೇಷಾದ್ರೀಪುರಂ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಕುರಿತು ಸುದ್ದಿಗೋಷ್ಠಿ ಕರೆದು ಮಾಹಿತಿ ಹಂಚಿಕೊಂಡ ಅವರು, ಎಂಬಿಬಿಎಸ್ ವೈದ್ಯರಿಗೆ 60 ಸಾವಿರ ರೂ. (ಹಿಂದಿನ ವೇತನ: 46,895-50,000 ರೂ.), ತಜ್ಞ ವೈದ್ಯರಿಗೆ 1,40,000 ರೂ. (ಹಿಂದಿನ ವೇತನ : 1,10,000 – 1,30,000) ಹಾಗೂ ಸ್ಟಾಫ್ ನರ್ಸ್‌ಗಳಿಗೆ 22 ಸಾವಿರ ರೂ. (ಹಿಂದಿನ ವೇತನ : 14,186 – 18,774 ರೂ.) ವೇತನ ನಿಗದಿಗೊಳಿಸಲಾಗಿದೆ” ಎಂದರು.
“ಪ್ರಮುಖ ಕ್ಲಿನಿಕಲ್ ತಜ್ಞ OBG, ಪೀಡಿಯಾಟ್ರಿಕ್, ಅರಿವಳಿಕೆ, ಜನರಲ್ ಮೆಡಿಸಿನ್, ಆರ್ಥೋ, ಸರ್ಜನ್, ನೇತ್ರಶಾಸ್ತ್ರಜ್ಞ)” ಹುದ್ದೆಗೆ ಆರಂಭಿಕ ವೇತನ ರೂ. 1,40,000.00 ನಿಗದಿಯಾಗಿದ್ದು, ಅನುಭವ ಹೊಂದಿರುವ ಅಭ್ಯರ್ಥಿಗಳು ಆಯ್ಕೆಯಾದಲ್ಲಿ, ಪ್ರತಿ ವರ್ಷದ ಅನುಭವಕ್ಕೆ 2.5 % ರಷ್ಟು ಹೆಚ್ಚುವರಿ ವೇತನವನ್ನು ಸಹ ನೀಡಲಾಗುತ್ತದೆ” ಎಂದು ಹೇಳಿದರು.