ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಸ್ವಾವಲಂಭಿ ಬದುಕಿಗೆ ಒಂದಷ್ಟು ಚೈತನ್ಯ ತುಂಬುತ್ತಿದ್ದ ಕೋಲಾರ-ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ರಾಜಕೀಯ ಮೇಲಾಟಕ್ಕೆ ಸಿಲುಕಿದೆ.
ಒಣ ರಾಜಕೀಯದಿಂದ ಸಂಘಕ್ಕೆ ಚುನಾವಣೆಯೂ ನಡೆಸಲಾಗದೇ ಅತ್ತ ಮಹಿಳೆಯರಿಗೆ ಸಾಲವನ್ನೂ ನೀಡಲಾಗದ ಸ್ಥಿತಿಗೆ ಬಂದು ತಲುಪಿದೆ. ಈ ನಡುವೆ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಬೇನಾಮಿ ಕಡತಗಳನ್ನು ಸೃಷ್ಟಿಸಿ ಐದು ಮಹಿಳಾ ಸಂಘಗಳ ಹೆಸರಿನಲ್ಲಿ ಸಾಲ ಪಡೆಯಲಾಗಿದೆಯೆಂದು ಆರೋಪಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಸುಣಕಲ್ಲು ಪಾರ್ವತಮ್ಮ ಮತ್ತಿತರೆ ಮಹಿಳೆಯರು ಸಲ್ಲಿಸಿರುವ ದೂರಿನಲ್ಲಿ ನಮ್ಮ ಕಾಂಚನಾ ಸ್ವ ಸಹಾಯ ಸಂಘದಿಂದ ಈ ಹಿಂದೆಯೂ ಸಾಲ ಪಡೆದಿದ್ದು ಅದನ್ನು ತೀರಿಸಿದ ನಂತರ ಮತ್ತೆ ಸಾಲ ಕೇಳಲು ಹೋದಾಗ ನಿಮ್ಮ ಸಂಘದ ಹೆಸರಿನಲ್ಲಿ 2 ನೇ ಸಾಲವನ್ನೂ ನೀಡಲಾಗಿದೆಯೆಂದು ತಿಳಿಸಿದ್ದು, ನಾವು ಮತ್ತೆ ಕೋಲಾರ ಡಿಸಿಸಿ ಬ್ಯಾಂಕ್‌ನಲ್ಲಿ ಈ ಬಗ್ಗೆ ಕೇಳಿದಾಗ ಅಲ್ಲಿಯೂ ಅದೇ ಉತ್ತರ ನೀಡಿದ್ದಾರೆಂದು ಆರೋಪಿಸಿ ಡಿ ಸಿ ಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡˌ ಶ್ರೀನಿವಾಸಪುರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್ ಮತ್ತು ರಾಯಲ್ಪಾಡು ಬ್ಯಾಂಕ್ ನ ಸಿಇಒ ನಾರಾಯಣಸ್ವಾಮಿ ಹಾಗೂ ಮಾಜಿ ಸಿಇಒ ವೆಂಕಟಮುನಿಯಪ್ಪ ನವರ ವಿರುದ್ದ ದೂರು ದಾಖಲಿಸಿದ್ದಾರೆ.
ಸದರಿ ವ್ಯಕ್ತಿಗಳು ಐದು ಮಹಿಳಾ ಸಂಘದ ಹೆಸರಿನಲ್ಲಿ ಸುಳ್ಳು ಕಡತ ಸೃಷ್ಟಿಸಿ ಸುಮಾರು 1.75 ಕೋಟಿ ರೂ. ಗಳನ್ನು ಸಾಲ ಪಡೆದು ಬ್ಯಾಂಕ್ ಗೆ ವಂಚಿಸಿದ್ದಾರೆಂದು ಆರೋಪ ಕೇಳಿ ಬಂದಿದೆ.