ಜಲಸಂಪನ್ಮೂಲ ಇಲಾಖೆಯಡಿಯ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಗಳನ್ನು ಒದಗಿಸುವ ಅವಶ್ಯಕತೆ ಇದೆ. ಪ್ರಸಕ್ತ ಸಾಲಿನಲ್ಲಿ ೯೪೦ ಕೋಟಿ ರೂಗಳ ಬಾಕಿ ಮೊತ್ತದ ೧೦ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ಆ ಮೂಲಕ ಸುಮಾರು ೨೫,೯೪೮ ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲು ಜಲಸಂಪನ್ಮೂಲ ಇಲಾಖೆ ಸಜ್ಜಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ -ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು ೩೯,೧೩೪ ಹೆಕ್ಟೇರ್ ಅಚ್ಚುಕಟ್ಟು ಸ್ಥಿರೀಕರಣ ಮಾಡುವ ನಿರ್ಧಾರವನ್ನು ಈ ಅಯವ್ಯಯದಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ.
ಇನ್ನು ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ೧೭೨ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ೧೯ ಕೆರೆ ತುಂಬಿಸುವ ಯೋಜನೆಗಳನ್ನು ೭೭೦ ಕೋಟಿ ರೂಗಳ ವೆಚ್ಚದಲ್ಲಿ ಪೂರ್ಣಗೊಳಿಸಿ ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರಕನ್ನಡ, ವಿಜಯನಗರ, ಕೊಪ್ಪಳ, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ೮೯೯ ಕೆರೆಗಳಿಗೆ ನೀರು ತುಂಬಿಸುವ ಸರ್ಕಾರದ ಯೋಜನೆಯು ಸಕಾಲಿಕ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಿದ್ದ ಎತ್ತಿನಹೊಳೆ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಲಸಂಪನ್ಮೂಲ ಇಲಾಖೆಗೆ ಪರಿಷ್ಕೃತ ಮೊತ್ತದ ಅನುದಾನವನ್ನು ಆಯವ್ಯಯದಲ್ಲಿ ಘೋಷಿಸಲಾಗಿದೆ.
ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಧ್ಯ ಕರ್ನಾಟಕದ ಪ್ರಮುಖ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಕಳೆದ ಆಯವ್ಯಯದಲ್ಲಿ ೫,೩೦೦ ಕೋಟಿ ರೂಗಳ ಅನುದಾನವನ್ನು ಘೋಷಿಸಿತ್ತು. ಅದನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇಲೆ ಕ್ರಮ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಮಹದಾಯಿ ನ್ಯಾಯಾಧೀಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ ೩.೯೦ ಟಿಎಂಸಿ ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದೆ. ಹೀಗಾಗಿ ಅವಶ್ಯಕತೆ ಇರುವ ಅರಣ್ಯ ತಿರುವಳಿ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂಬುದನ್ನು ಆಯವ್ಯಯದಲ್ಲಿ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಪಿಎಂಕೆಎಸ್ ವೈ- ಎಐಬಿಪಿ ಯೋಜನೆಯಡಿ ೨೦೨೧- ೨೬ನೇ ಅವಧಿಗೆ ಪರಿಗಣಿಸಲಾದ ಪಟ್ಟಿಯಲ್ಲಿ ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ೧ ಮತ್ತು ೨ರ ವಿಸ್ತರಣೆ ಹಾಗೂ ಸನ್ನತಿ ಏತ ನೀರಾವರಿ ಯೋಜನೆಗಳನ್ನು ಗುರುತಿಸಲಾಗಿದೆ. ಈ ಯೋಜನೆಗಳಿಗೆ ಕೇಂದ್ರದ ಸಹಾಯಧನ ಪಡೆಯಲು ಆದ್ಯತೆಯ ಕ್ರಮ ಜರುಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನ ಜಲಾಶಯ ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ ಸಹಮತಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ನಿರ್ಧರಿಸಿದೆ.
ಕೃಷ್ಣ ನ್ಯಾಯಾಧೀಕರಣ-೨ರ ತೀರ್ಪಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ ೩ಕ್ಕೆ ಹಂಚಿಕೆಯಾಗಿರುವ ೧೩೦ ಟಿಎಂಸಿ ನೀರಿನ ಬಳಕೆಗಾಗಿ ಯೋಜನಾ ಕಾಮಗಾರಿಗಳ ಜೊತೆಗೆ ಭೂ ಸ್ವಾಧೀನತೆ ಹಾಗೂ ಪುನರ್ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಒಟ್ಟಾರೆ, ಜಲಸಂಪನ್ಮೂಲ ಇಲಾಖೆಯಡಿ ಬಾಕಿ ಉಳಿದಿರುವ ಎಲ್ಲಾ ಯೋಜನೆಗಳನ್ನೂ ಪೂರ್ಣಗೊಳಿಸುವುದಾಗಿ ನೂತನ ಕಾಂಗ್ರೆಸ್ ಸರ್ಕಾರ ತನ್ನ ಪೂರಕ ಆಯವ್ಯಯದಲ್ಲಿ ಘೋಷಿಸಿದೆ. ಆ ಮೂಲಕ ರಾಜ್ಯದ ಜನರ ನೀರಾವರಿ ನಿರೀಕ್ಷೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ.